ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ 28ಕ್ಕೆ

CCC-BJP
Published on

ಚಿತ್ರದುರ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಅದನ್ನು ಖಂಡಿಸಿ, ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜೂ. 28ಕ್ಕೆ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿ ದೊಡ್ಡ ಭ್ರಷ್ಟಾಚಾರದ ಈ ಪ್ರಕರಣ ಅಧಿಕಾರಿ ಆತ್ಮಹತ್ಯೆ ಬಳಿಕ ಜಗಜಾಹೀರಾಗಿದೆ. ಸಿಬಿಐ ತನಿಖೆಗೆ ಒತ್ತಾಯಿಸಿದ ನಂತರ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲಾಯಿತು ಎಂದರು.

ಸ್ವತಃ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರವಿಲ್ಲ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳ ಕೈವಾಡವಿದ್ದರೂ ಕಠಿಣ ಶಿಕ್ಷೆಯಾಗಬೇಕು. ಬಿಜೆಪಿ ಪ್ರತಿಭಟನೆಗೆ ವ್ಯಾಪಕ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ನಿಗಮದ ಹಣ 700 ಬ್ಯಾಂಕ್ ಖಾತೆಗಳಿಗೆ ಹರಿದಾಡಿದೆ. ಇದರಲ್ಲಿ 2 ಕೋಟಿ ರೂ. ಮೌಲ್ಯದ ಕಾರೊಂದನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಚುನಾವಣೆಗಾಗಿಯೂ ದುರುಪಯೋಗ ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ಮನಸೋ ಇಚ್ಛೆ ದುರ್ಬಳಕೆ ಆಗುತ್ತಿದೆ. ಸಿಎಂ ಅವರ ಕೈ ಕೆಳಗೆ ನಡೆದರೂ ಮೌನ ವಹಿಸಿದ್ದಾರೆ. ಹೀಗಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ವಾಲ್ಮೀಕಿ ಬೇರೆಯಲ್ಲ, ಇನ್ನಿತರೆ ಸಮುದಾಯ ಬೇರೆಯಲ್ಲ. ಚಿತ್ರದುರ್ಗ, ದಾವಣಗೆರೆ, ಜಗಳೂರು, ಶಿರಾ, ಪಾವಗಡ ಸೇರಿ ವಿವಿಧ ಭಾಗಗಳಿಂದ ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ನಾಯಕರು ವಾಲ್ಮೀಕಿ ನಿಗಮದ ದುಡ್ಡೊಡೆಯುತ್ತಿದ್ದಾರೆ. ಎಸ್ಸಿ, ಎಸ್ಟಿ ಹಣ ದುರುಪಯೋಗ ಆಗುತ್ತಿದೆ. ಈ ಕುರಿತು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಧೈರ್ಯ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಕಿಡಿಕಾರಿದರು.

ಭ್ರಷ್ಟಾಚಾರದ ಕಾರಣಕ್ಕೆ ಒಬ್ಬರ ಬಲಿ ಪಡೆಯಲಾಗಿದೆ. ಪಕ್ಷಾತೀತವಾಗಿ ವಾಲ್ಮೀಕಿ ಸಮುದಾಯದ ಪ್ರತಿಯೊಬ್ಬರು ಪಾಲ್ಗೊಳ್ಳಿ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕಿತ್ತು. ಆದರೆ, ಇದಕ್ಕಾಗಿ ಪ್ರತಿಭಟಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಹನುಮಂತೇಗೌಡ, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಜಿ.ಟಿ.ಸುರೇಶ್ ಸಿದ್ದಾಪುರ, ಪಿ.ಸಂಪತ್‌ಕುಮಾರ್, ಶಿವಣ್ಣ, ಪಾಲಯ್ಯ, ಸೋಮೇಂದ್ರ, ಕವನಾ, ಛಲವಾದಿ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net