ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ

Sudhakar
Published on

ಚಿತ್ರದುರ್ಗ: ಮುಡಾ ಪ್ರಕರಣ ಕುರಿತು ಬಿಜೆಪಿಗರು ದಿನಕ್ಕೊಂದು ಸುಳ್ಳು ಹೇಳುತ್ತಿದ್ದು, ತನಿಖೆಯಿಂದ ಸತ್ಯ ಹೊರಬರಲಿದೆ. ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪವೂ ಬರಬಾರದೆಂಬ ಮನೋಭಾವದಿಂದ, ಅವರಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಎಂಬ ಕಾರಣಕ್ಕೆ ಪತ್ನಿ ಪಾರ್ವತಮ್ಮ ಹಿಂದಿರುಗಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಆಗಿದ್ದ ಭ್ರಷ್ಟಾಚಾರವನ್ನು ಮರೆತಿದ್ದಾರೆ. ಸಾಕಷ್ಟು ಹಗರಣ ಮುಚ್ಚಿ ಹಾಕಿದ್ದಾರೆ. ಕೆಲವರು ಜೈಲಿಗೂ ಹೋಗಿ ಬಂದಿದ್ದಾರೆ. ಅವರ‌್ಯಾರಾದರೂ ಅಕ್ರಮ ಆಸ್ತಿ, ನಿವೇಶನ ಹಿಂದಿರುಗಿಸಿದ್ದಾರಾ ಎಂದು ಪ್ರಶ್ನಿಸಿದರು.

ದಸರಾದೊಳಗೆ ಸಿಎಂ ರಾಜೀನಾಮೆ ನೀಡಿ, ಅರೆಸ್ಟ್ ಆಗುತ್ತಾರೆಂದು ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಇಡಿ ಪ್ರಕರಣ ದಾಖಲಿಸಿದ್ದರಿಂದ ಏನೂ ಆಗದು. ಸತ್ಯ ಮರೆಮಾಚಲು ಎಂದಿಗೂ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗ ಎಲ್ಲರೂ ಒಂದೇ. ದಲಿತ ಸಿಎಂ ಪ್ರಸ್ತಾಪ ಸತ್ಯಕ್ಕೆ ದೂರವಾದುದು. ಈ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net