

ಬೆಳಗಾವಿ: ಮುಡಾ ಹಗರಣ ವಿಚಾರದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರಷ್ಟೇ. ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಕ್ಕೆ ಕಾನೂನು ಹೋರಾಟ ಮಾಡುತ್ತೇವೆ. ದೇಶದ ಎಲ್ಲ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ 25 ಸಚಿವರ ಮೇಲೆ ಕೇಸ್ ದಾಖಲಾಗಿವೆ. ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿವೆ. ಆದರೆ ಅದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿರೋಧ ಪದ ಆಡಳಿತ ಇರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ಮುಂದುವರಿಸಿದ್ದು, ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಕಗ್ಗೊಲೆಗೆ ಮುಂದಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಕೇಂದ್ರದ ಆಣತಿಯಂತೆ ನಡೆದು, ನಿರಾಧಾರವಾದ ಮುಡಾ ಆರೋಪಕ್ಕೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ರಾಜಕೀಯ ಪ್ರೇರಿತವಾದ ಈ ನಡೆಯನ್ನು ಖಂಡಿಸುತ್ತೇನೆ. ಇಂತಹ ಷಡ್ಯಂತ್ರ ವಿರುದ್ಧ ಸರ್ಕಾರ ಕಾನೂನು ಹೋರಾಟ ನಡೆಸಲಿದೆ. ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ಎಲ್ಲ ಶಾಸಕರು, ಸಚಿವರು ಹಾಗೂ ಹೈಕಮಾಂಡ್ ಕೂಡ ನಿಲ್ಲುತ್ತದೆ ಎಂದರು.