ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ - ಸಚಿವ ಸತೀಶ ಜಾರಕಿಹೊಳಿ

300
Published on

ಬೆಳಗಾವಿ: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ತನಿಖೆ ಆಗದ ಹೊರತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ. ಪಕ್ಷದ ಹೈಕಮಾಂಡ್ ಸೇರಿ ಎಲ್ಲ ಸಚಿವರು, ಶಾಸಕರು ಅವರ ಬೆಂಬಲಕ್ಕೆ ನಿಂತಿರುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯಮಂತ್ರಿ ವಿರುದ್ಧ ತನಿಖೆ ಮುಂದುವರೆಸಲು ಆದೇಶಿಸಿದೆಯಾದರೂ ಮೊದಲು ತನಿಖೆ ನಡೆದು ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು. ಅಲ್ಲಿಯವರೆಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿಯೇ ಮುಂದುವರಿಯಲಿದ್ದಾರೆ ಎಂದರು.

ಮುಡಾ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಮುಖ್ಯಮಂತ್ರಿಗಳು ಕಾನೂನು ಹೋರಾಟ ಮುಂದುವರಿಸಲಿದ್ದಾರೆ. ಇದು ಭ್ರಷ್ಟಾಚಾರದ ಪ್ರಕರಣ ಅಲ್ಲವೇ ಅಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿದೆ. ರಾಜೀನಾಮ ನೀಡುವ ನೈತಿಕತೆ ವಿಷಯ ಬಂದಾಗ ಚರ್ಚಿಸೋಣ ಎಂದರು.

ಶಾಸಕ ಆಸೀಫ್ ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಇತರರಿದ್ದರು.

ಬೆಂಗಳೂರಿಗೆ ಬುಲಾವ್ ಬಂದಿದೆ: ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಮುಡಾ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಳಿಸಿರುವ ಹಿನ್ನೆಲೆ ಪಕ್ಷದ ವರಿಷ್ಠರು ಸೆ.25ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಹಾಗಾಗಿ ಬೆಂಗಳೂರಿಗೆ ಬರಲು ಬುಲಾವ್ ಬಂದಿದೆ ಹೊರತು ದೆಹಲಿಗೆ ಕರೆದಿಲ್ಲ.

ಸಿದ್ದರಾಮಯ್ಯ ಪರವಾಗಿ ವಿಶ್ವಾಸ ವ್ಯಕ್ತಪಡಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಬಹುತೇಕ ಜನಪ್ರತಿನಿಧಿಗಳ ಮೇಲೆ ನಾನಾ ರೀತಿಯ ಕೇಸ್‌ಗಳಿವೆ. ಹಾಗಂತ ಎಲ್ಲರೂ ರಾಜೀನಾಮೆ ಕೊಟ್ಟಿದ್ದಾರೆಯೇ? ಹಾಗಿರುವಾಗ, ಸಿದ್ದರಾಮಯ್ಯ ರಾಜೀನಾಮೆ ಏಕೆ ಕೊಡಬೇಕು? ವಾಲ್ಮೀಕಿ ಮತ್ತು ಮುಡಾ ಪ್ರಕರಣಗಳು ಬೇರೆ ಬೇರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net