ಸಿಎಂ ಯೋಗಿ ಜತೆ ಚವ್ಹಾಣ್ ಚರ್ಚೆ

chouhan met yogi
Published on

ಬೀದರ್: ಪ್ರತಿಪಕ್ಷಗಳ ವಿರೋಧ, ಕೆಲ ಸಂಘಟನೆಗಳ ಮುಖಂಡರ ಆಕ್ಷೇಪ, ಟೀಕೆಗಳ ನಡುವೆಯೇ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ಜಾರಿಗೆ ತರುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸಿದೆ. ಮುಂದಿನ ವಾರ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ವಿಧೇಯಕ ಮಂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಕಠಿಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರುವುದು ಪಕ್ಕಾ. ಡಿ. 7ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ಮಂಡಿಸಿ ಸಮ್ಮತಿ ಪಡೆಯಲಾಗುತ್ತದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಹೊಸ ಕಾಯ್ದೆಯಲ್ಲಿ ಏನಿರಬೇಕು? ಯಾವ ಅಂಶಗಳು ಒಳಗೊಂಡಿರಬೇಕು? ರೂಪುರೇಷ ಹೇಗಿರಬೇಕೆಂಬ ಬಗ್ಗೆ ಅಧ್ಯಯನ ನಡೆಸಲು ಸಚಿವ ಚವ್ಹಾಣ್ ನೇತೃತ್ವದ ತಂಡ ವಿವಿಧ ರಾಜ್ಯಗಳ ಪ್ರವಾಸದಲ್ಲಿದೆ. ಗುರುವಾರ ಉತ್ತರಪ್ರದೇಶಕ್ಕೆ ಭೇಟಿ ನೀಡಿದ ತಂಡ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಸುದೀರ್ಘ ಸಮಾಲೋಚನೆ ನಡೆಸಿದೆ.

ಲಖನೌದಲ್ಲಿ ಯೋಗಿ ಅವರೊಂದಿಗೆ ಸುಮಾರು 45 ನಿಮಿಷ ಸಚಿವ ಚವ್ಹಾಣ್ ಅವರ ನೇತೃತ್ವದ ತಂಡ ಅಲ್ಲಿನ ಗೋಹತ್ಯೆ ಕಾಯ್ದೆ ಕುರಿತು ಚರ್ಚೆ ನಡೆಸಿದೆ. ಹೊಸ ಕಾಯ್ದೆಯಡಿ ಹೇರಿದ ವಿವಿಧ ಕಠಿಣ ಕ್ರಮಗಳು, ಅದರ ಸಾಧಕ-ಬಾಧಕಗಳು, ಜನರು ಹಾಗೂ ರೈತರಿಂದ ವ್ಯಕ್ತವಾದ ಪರ-ವಿರೋಧ ಸೇರಿದಂತೆ ಈ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿದೆ. ಈ ವೇಳೆ ಅಲ್ಲಿನ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಗೋಹತ್ಯೆ ನಿಷೇಧ ಜಾರಿ ಮತ್ತು ನಂತರದ ಬೆಳವಣಿಗೆ ಬಗ್ಗೆ ವಿವರಣೆ ನೀಡಿದರು.

ಗೋಹತ್ಯೆ ನಿಷೇಧ ಕಾಯ್ದೆ ಕಠಿಣಗೊಳಿಸಲು ಕರ್ನಾಟಕ ಸರ್ಕಾರ ಸಂಕಲ್ಪ ಮಾಡಿದೆ. ಸಿಎಂ ಯಡಿಯೂರಪ್ಪ ಅವರು ಕಠಿಣ ಕಾಯ್ದೆ ಜಾರಿಗೆ ಹಸಿರು ನಿಶಾನೆ ಸಹ ತೋರಿಸಿದ್ದಾರೆ ಎಂಬ ಅಂಶ ಯೋಗಿ ಅವರ ಗಮನಕ್ಕೆ ತಂದಾಗ ಬಹಳ ಖುಷಿಪಟ್ಟರು. ಗೋಹತ್ಯೆ ನಿಷೇಧ ಆಗಲೇಬೇಕು. ಗೋವು ಉಳಿದರೆ ದೇಶ, ಕೃಷಿ ಹಾಗೂ ಸಂಸ್ಕೃತಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕೈಗೊಳ್ಳುವ ಯಾವುದೇ ಕಠಿಣ ನಿರ್ಧಾರಕ್ಕೆ ಜನರು, ರೈತರು ಬೆಂಬಲಿಸುತ್ತಾರೆ. ಇದಕ್ಕೆ ನಮ್ಮ ರಾಜ್ಯವೇ ನಿದರ್ಶನ ಎಂದು ಯೋಗಿ ಅವರು ಹೇಳಿದರು ಎಂದು ಸಚಿವ ಪ್ರಭು ಚವ್ಹಾಣ್ ವಿಜಯವಾಣಿಗೆ ಮಾಹಿತಿ ನೀಡಿದರು.

ಉತ್ತರಪ್ರದೇಶ ಪಶು ಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ಜತೆಗೂ ಪ್ರತ್ಯೇಕ ಚರ್ಚೆ ನಡೆಸಲಾಯಿತು. ಅಯೋಧ್ಯೆ ಶ್ರೀರಾಮಮಂದಿರ, ಹನುಮಾನಗಡಗೆ ತೆರಳಿ ದರ್ಶನ ಪಡೆಯುವ ಜತೆಗೆ ಅಲ್ಲಿಯ ಗೋ ಆಶ್ರಯ ಸ್ಥಳಕ್ಕೂ ಭೇಟಿ ನೀಡಲಾಗಿದೆ. ನಿಬ್ಲೆಟ್ ನಲ್ಲಿರುವ ಐಎಫ್ ಸೆಂಟರ್, ಸಾಹಿವಾಲ್ ಫಾಮ್೯ ಭೇಟಿ ನೀಡಲಾಗಿದೆ. ಶುಕ್ರವಾರ ಗುಜರಾತ್ ನ ಗಾಂಧಿನಗರಕ್ಕೆ ತೆರಳಿ, ಪಶು ಸಂಗೋಪನೆ ಸಚಿವರು ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಅಲ್ಲಿನ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲಾಗುವುದು. ಎರಡೂ ರಾಜ್ಯಗಳಲ್ಲಿನ ಕಠಿಣ ಅಂಶಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸುವ ಗಂಭೀರ ಚಿಂತನೆ ನಡೆದಿವೆ. ಈ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದು ಮುಂದುವರಿದ ಪ್ರಯತ್ನ
ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಠಿಣಗೊಳಿಸಲು ಬಿಜೆಪಿ ಸರ್ಕಾರ ಈಗ ತನ್ನ ಹಿಂದಿನ ಪ್ರಯತ್ನವನ್ನು ಮುಂದುವರಿಸಿದೆ. 2010ರಲ್ಲಿ ಆಗಿನ ಯಡಿಯೂರಪ್ಪ ಸರ್ಕಾರ ಗೋಹತ್ಯೆ ನಿಷೇಧಕ್ಕಾಗಿ ಕಠಿಣ ಕಾಯ್ದೆ ಜಾರಿಗೆ ನಿರ್ಧರಿಸಿ, ವಿಧೇಯಕವನ್ನು ಸಹ ಮಂಡಿಸಿತ್ತು. ಆದರೆ ಕಾರಣಾಂತರಕ್ಕೆ ಅದು ಜಾರಿಗೊಳ್ಳಲಿಲ್ಲ. ಹತ್ತು ವರ್ಷ ಬಳಿಕ ಈಗ ಮತ್ತೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಈ ಪ್ರಯತ್ನ ಮುಂದುವರಿದಿರುವುದು ವಿಶೇಷ. ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010ನ್ನು ಹಿಂದಿನ ಬಿಜೆಪಿ ಸರ್ಕಾರದ ವೇಳೇ ವಿಧಾನಮಂಡಲದಲ್ಲಿ ಮಂಡಿಸಿ ರಾಜ್ಯಪಾಲರ ಅನುಮೋದನೆಗೆ ಕಳಿಸಲಾಗಿತ್ತು. ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು ಇದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಿದ್ದರಿಂದ ಕಾಯ್ದೆ ಅನುಷ್ಠಾನದಲ್ಲಿ ವಿಳಂಬವಾಯಿತು. ಈ ಮಧ್ಯೆ ಯುಪಿಎ-2 ಸಕಾರದ ಅವಧಿಯಲ್ಲಿ ಕೇಂದ್ರ ಗೃಹ ಇಲಾಖೆ ಸಹ ಇದಕ್ಕೆ ಕೆಲ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚಿಸಿತ್ತು. ಈ ಎಲ್ಲ ಬೆಳವಣಿಗೆ ನಡುವೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಹೋಗಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನೇ ಮುಂದುವರೆಸಿತ್ತು. ಇದೀಗ ಈ ಕಾಯ್ದೆ ಮತ್ತಷ್ಟು ಬಲಪಡಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಹೊಸ ಕಾಯ್ದೆ ಜಾರಿಗೆ ಬಂದರೆ ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗುವ ಜತೆಗೆ ರಾಜ್ಯದ ಒಳಗೆ ಮತ್ತು ಹೊರಗೆ ಗೋಮಾಂಸ ಆಮದು ಮತ್ತು ರಫ್ತಿಗೂ ಬ್ರೇಕ್ ಬೀಳಲಿದೆ. ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರುಗಳ ಅಕ್ರಮ ಸಾಗಣೆ, ವಧೆಗಾಗಿ ಜಾನುವಾರು ಖರೀದಿ, ಮಾರಾಟ ಅಥವಾ ವಿಲೇವಾರಿಯೂ ನಡೆಯದು.| ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net