ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ

13
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರೋಡ್ ಶೋ ಮೂಲಕ ಗಮನ ಸೆಳೆದರು.
ನಗರದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಬಳಿಯಿಂದ ಕೆ.ಆರ್.ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದ ಮುಖ್ಯಮಂತ್ರಿ, ಅಗ್ರಹಾರ ವೃತ್ತದಿಂದ ಮದ್ವಾಚಾರ್ ರಸ್ತೆ, ನಂಜುಮಳಿಗೆ ಮುಖಾಂತರ ಚಾಮುಂಡಿಪುರಂ ವೃತ್ತದವರೆಗೆ ರೋಡ್ ಶೋ ಮಾಡಿ ಪಕ್ಷದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಪರ ಮತಯಾಚನೆ ನಡೆಸಿದರು.
ಪಕ್ಷದ ಒಬಿಸಿ ರಾಜ್ಯಾಧ್ಯಕ್ಷ ನರೇಂದ್ರ ಬಾಬು, ನಟಿ ತಾರಾ, ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು ಇತರರು ಇದ್ದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಮೈಸೂರು ಪಾರಂಪರಿಕ, ಐತಿಹಾಸಿಕ ನಗರವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೂರು ದಶಕಗಳಿಂದ ಬಿಜೆಪಿ ಪ್ರಾಬಲ್ಯವಿದ್ದು, ಮತದಾರರು ಪಕ್ಷವನ್ನು ಬೆಂಬಲಿಸಿ ಶಾಸಕರು, ಸಂಸದರನ್ನು ನೀಡಿದೆ ಎಂದರು.
ಸೋಲುವ ಹತಾಶೆಯಿಂದ ಕಾಂಗ್ರೆಸ್ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದೆ. ನರೇಂದ್ರ ಮೋದಿ ಅವರನ್ನು ಪ್ರಿಯಾಂಕ ಖರ್ಗೆ ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ಕಾಂಗ್ರೆಸ್‌ನವರಿಗೆ ತಕ್ಕಪಾಠ ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಕೋರಿದರು.
ನಮ್ಮ ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ವಿರೋಧ ಪಕ್ಷದವರು ಹತಾಶರಾಗಿ ಕೀಳು ಮಟ್ಟದ ಮಾತುಗಳನಾಡುತ್ತಿದ್ದಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಜನರು ಬೆಂಬಲ ಕೊಡುತ್ತಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಕ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಲು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೊಳಿಸಿದ್ದೇವೆ. ರೈತರು ಮತ್ತು ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಂದಿದ್ದೇವೆ ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮೈಸೂರು ನಗರ ಅಭಿವೃದ್ಧಿ ಮಾಡಿದ್ದೇವೆ. ನರೇಂದ್ರ ಮೋದಿ ಅವರಿಗೆ ಮೈಸೂರಿನ ಬಗ್ಗೆ ಬಹಳ ಒಲವು ಇದೆ. ಹಾಗಾಗಿ ಅವರಿಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮೈಸೂರಿಗರೂ ಪ್ರೀತಿ ತೋರಬೇಕು ಎಂದು ಕೋರಿದರು.
ಮುಖ್ಯಮಂತ್ರಿಯಾದ ಬಳಿಕ ನಗರಕ್ಕೆ 250 ಕೋಟಿ ರೂ.ಗಳಿಗೂ ಅಧಿಕ ಅನುದಾನ ಕೊಟ್ಟಿದ್ದೇನೆ. ಮೈಸೂರು ದಸರಾಗೆ ವಿಶೇಷವಾಗಿ 25 ಕೋಟಿ ರೂ. ನೀಡಿ ಈ ಬಾರಿಯ ದಸರಾ ಆಚರಣೆಯನ್ನು ಅದ್ದೂರಿಯಾಗಿ ಮಾಡಿದ್ದೇವೆ. ಮೈಸೂರು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರವಾಗಿದೆ. ಮೈಸೂರು ಸರ್ಕಿಟ್ ಮಾಡಿ ಇಲ್ಲಿ ವಿಶೇಷವಾದ ಪ್ರವಾಸೋದ್ಯಮ ವಲಯ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಆ ಯೋಜನೆ ಕಾರ್ಯಗತಿಯಲ್ಲಿದ್ದು, ಮುಂದಿನ ವರ್ಷ ಮೈಸೂರಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ದ್ವಿಗುಣ ಆಗಲಿದೆ ಎಂದರು.
ಕೆ.ಆರ್. ಆಸ್ಪತ್ರೆ ಕಟ್ಟಡ ಮರು ನಿರ್ಮಾಣ ಮಾಡಲು 80 ಕೋಟಿ ರೂ. ಕೊಟ್ಟಿದ್ದೇವೆ. ನಮ್ಮ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಎಲ್ಲ ವಿದ್ಯಾರ್ಥಿಗಳು, ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ಪಾಸ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ ಕಲ್ಪಿಸುತ್ತಿದ್ದೇವೆ. ಇಲ್ಲಿನ 50 ಸಾವಿರ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭ ಸಿಕ್ಕಿದೆ. ಅವರೆಲ್ಲರೂ ಬಿಜೆಪಿಗೆ ಮತ ನೀಡಲು ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹತಾಶೆಗೊಂಡು 10 ಕೆ.ಜಿ ಅಕ್ಕಿ ಕೊಡುವ ಗ್ಯಾರಂಟಿ ಕೊಡುತ್ತಿದೆ. 2013ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಇವರು ಅಧಿಕಾರಕ್ಕೆ ಬಂದ ಮೇಲೆ 5 ಕೆ.ಜಿ ಗೆ ಇಳಿಸಿದರು. ಕಾಂಗ್ರೆಸ್ ಚುನಾವಣೆಗಾಗಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net