

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅವಹೇಳನಕಾರಿ ಮಾತನಾಡಿದ ಕಾರಣಕ್ಕೆ ಮತ್ತೊಬ್ಬ ಕಾರಾಗೃಹ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ನಗರದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಎಸ್.ಬಿ.ಪುನೀತ್ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೊಣಚಿಕೊಪ್ಪಲು ನಿವಾಸಿ ಎಸ್.ಪವನ್ ನೀಡಿದ ದೂರಿನ ಮೇರೆಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ವಾರ್ಡನ್ ಮಧುಕುಮಾರ್ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದರು.
ಇವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜೈಲಿನ ಎದುರು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಯ ವಿಚಾರವನ್ನು ತಮ್ಮ ಮೊಬೈಲ್‌ನ ಸ್ಟೇಟಸ್‌ಗೆ ಪವನ್ ಹಾಕಿಕೊಂಡಿದ್ದಾರೆ.
ಇದನ್ನು ಗಮನಿಸಿ ಮೇ 7ರಂದು ಪವನ್ ಅವರಿಗೆ ವ್ಯಾಟ್ಸ್‌ಆ್ಯಪ್ ಕರೆ ಮಾಡಿದ್ದು, ಆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಧುಕುಮಾರ್ ಮಾತನಾಡಿದ್ದು ಸರಿ ಎಂದು ಪುನೀತ್ ಸಮರ್ಥಿಸಿಕೊಂಡಿದ್ದಾನೆ. ನೀವು ಪ್ರತಿಭಟನೆ ಏಕೆ ಮಾಡಿದ್ದೀರಿ ಎಂದು ನನಗೆ ಧಮ್ಕಿ ಹಾಕಿದ್ದಾನೆ ಎಂದು ಪವನ್ ದೂರಿನಲ್ಲಿ ಆರೋಪಿಸಿದ್ದಾರೆ.