ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

mysore
Published on

ಮೈಸೂರು: ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮೋತ್ಸವದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು. ಪೊಲೀಸರ ಅನುಮತಿ ಇಲ್ಲದಿದ್ದರೂ ಪ್ರಚಾರಕ್ಕಾಗಿ ಇವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಯೋಜನೆ ಮಾಡಿದ್ದರಿಂದಾಗಿ ಅಮಾಯಕ ಅಭಿಮಾನಿಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.

ಮೆರವಣಿಗೆ ಹಾಗೂ ಎರಡು ಕಡೆಗಳಲ್ಲಿ ವಿಜಯೋತ್ಸವ ಆಚರಣೆ ಮಾಡುವುದು ಬೇಡ ಎಂದು ಪೊಲೀಸರು ವರದಿ ನೀಡಿದ್ದರು. ಇದನ್ನು ಪರಿಗಣಿಸದೆ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಿಎಂ, ಡಿಸಿಎಂ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕ ಸಂಪನ್ಮೂಲ ಇಲ್ಲದೆ ದಿವಾಳಿ ಎದ್ದಿದೆ. ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಿಸಿದ್ದ ಸರ್ಕಾರವು ವಿದ್ಯುತ್ ಬಿಲ್ ಮೇಲೆ ಸರ್ ಚಾರ್ಜ್ ಸಂಗ್ರಹಿಸಲು ಮುಂದಾಗಿರುವುದು ಖಂಡನೀಯ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಪ್ರವೇಶ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಆಷಾಢ ಮಾಸದ ಶುಕ್ರವಾರ ಸಂದರ್ಭದಲ್ಲಿ 2 ಸಾವಿರ ರೂ.ಟಿಕೆಟ್ ನಿಗದಿ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಹಾಲು, ವಿದ್ಯುತ್, ಕುಡಿಯುವ ನೀರು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ್ದರೂ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸಲಾಗದೆ ಪರದಾಡುತ್ತಿರುವ ಸರ್ಕಾರ ಈಗ ಎಲ್ಲದರಲ್ಲೂ ತೆರಿಗೆ ವಿಧಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ತಪ್ಪು ನಿರ್ಧಾರವು 11 ಜನರ ಅಮಾಯಕರ ಸಾವಿಗೆ ಕಾರಣವಾಗಿದೆ. ಸಿಎಂ, ಡಿಸಿಎಂ ರಾಜೀನಾಮೆ ಕೊಡುವ ತನಕವೂ ಹೋರಾಟ ನಿಲ್ಲಲ್ಲ ಎಂದರು.

ಗೃಹ ಸಚಿವರು ಸ್ವಯಂ ಪ್ರೇರಿತವಾಗಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಗೃಹ ಇಲಾಖೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.

ಸರ್ಕಾರ ತುಘಲಕ್ ಆಡಳಿತ ನಡೆಸುತ್ತಿದ್ದಾರೆ. 2 ವರ್ಷಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಗ್ಯಾರಂಟಿ ಯೋಜನೆ ಕೊಡುತ್ತೇವೆಂದು ಹೇಳುತ್ತಿರುವ ಸರ್ಕಾರ ಅಭಿವೃದ್ಧಿ ಕಾರ್ಯ ಮರೆತುಬಿಟ್ಟಿದೆ ಎಂದು ಲೇವಡಿ ಮಾಡಿದರು.

ಮಾಜಿ ಮೇಯರ್ ಶಿವಕುವಾರ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್, ಮಾಜಿ ಸದಸ್ಯರಾದ ರಮೇಶ್, ಎಸ್.ಲಕ್ಷ್ಮೀದೇವಿ, ಮಾಜಿ ಉಪ ಮೇಯರ್ ವಿ.ಶೈಲೇಂದ್ರ, ಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ.ಶಂಕರ್, ರವೀಂದ್ರ, ಲಕ್ಷ್ಮೀ ಕಿರಣ್ ಗೌಡ, ರಂಗಸ್ವಾಮಿ, ಎಂ.ಯು.ಸುಬ್ಬಯ್ಯ, ಮುಖಂಡರಾದ ಶಿವಕುವಾರ್, ಬಿ.ಪಿ.ಮಂಜುನಾಥ್, ಡಾ.ಅನಿಲ್ ಥಾಮಸ್, ಬಿ.ಎಂ.ರಘು, ಮೋನಿಕಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net