

ಚಿಕ್ಕಮಗಳೂರು: ದಿನ ಬೆಳಗಾದರೆ ಬೇಡವಾದ ವಿಷಯ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರು ಮಾತನಾಡಿ ಜನರನ್ನು ಯಾಮರಿಸುತ್ತಿದ್ದಾರೆ. ಇವರಿಬ್ಬರು ನಾಟಕವಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೃಪಾಪೋಷಿತ ನಾಟಕ ಮಂಡಳಿ ಇದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಚಿಕ್ಕಮಗಳೂರು - ತಿರುಪತಿ ನೂತನ ರೈಲು ಸಂಪರ್ಕಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಇರ್ತಿನಿ, ನಾನೇ ಇರ್ತಿನಿ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ನಡುವೆ ಜನರನ್ನು ದಾರಿ ತಪ್ಪಿಸುವ ಒಳ ಒಪ್ಪಂದ ಆಗಿದೆ ಎಂಬ ಸಂಶಯ ಬರುತ್ತಿದೆ ಎಂದರು.
ನೀವು ಇದ್ದೀರೋ ಇಲ್ವೋ, ನಿಮ್ಮ ಪಂಚೆ ಬೇರೆಯವರು ಎಳೆದಿದ್ದಾರೋ ಗೊತ್ತಿಲ್ಲ. ನಿಮಗೆ ನಮ್ಮವರು ಯಾರೂ ತೊಂದ್ರೆ ಕೊಡುತ್ತಿಲ್ಲ. ಜನರನ್ನು ದಾರಿ ತಪ್ಪಿಸುವ ನಾಟಕ ಬಿಟ್ಟು, ಅಭಿವೃದ್ಧಿಗೆ ಹಣ ಕೊಡಿ ಎಂದರು.
ಯಾರು ಏನಾದರೂ ಮಾಡ್ಲಿ, ಬಟ್ಟೆ ಬಿಚ್ಚಿ ಕುಣಿಯಲೀ, ನಮ್ಮ ರಾಜ್ಯಕ್ಕೆ ಒಳ್ಳೆಯದು ಮಾಡಲಿ. ರಾಜ್ಯದ ಜನರಲ್ಲಿರುವ ಗಾಢ ಅಂಧಕಾರ ವ್ಯವಸ್ಥೆ ಸರಿ ಪಡಿಸಲಿ, ಸಿದ್ದರಾಮಯ್ಯ ಅವರಿಗೆ ಕಳೆದು ಹೋಗಿದ್ದೀರಾ ಎಂದು ಪದೇ ಪದೇ ಹೇಳುತ್ತಿದ್ದೇನೆ. ನಿಮಗೆ ನಾವು ತೊಂದ್ರೆ ಕೊಟ್ಟಿದ್ದೀವಾ, ಅವರ ಪಾರ್ಟಿಯವರು ತೊಂದರೆ ಕೊಡ್ತಾ ಇದ್ದಾರೆ. ಜನರಿಗೆ ಸವಲತ್ತು ಕೊಡುವ ಕೆಲಸ ಕಾರ್ಯ ಮಾಡದೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.