ಸಿಎಂ ಟೀಕಿಸಿದವರು ಕೈ ಕಟ್ಟಿ ನಿಂತಿದ್ದಾರೆ!

19 11
Published on

ಕನಕ ಜಯಂತಿಯಲ್ಲಿ ಸಚಿವ ಬೈರತಿ ಸುರೇಶ್​ ವ್ಯಂಗ್ಯ, ನಮ್ಮೆಲ್ಲರ ಗೆಲುವಿಗೆ ಸಿದ್ದರಾಮಯ್ಯರೇ ಕಾರಣ

ಕೋಲಾರ: ಕುರಿ ಲೆಕ್ಕ ಮಾಡಲು ಬಾರದ ಸಿದ್ದರಾಮಯ್ಯ ಬಜೆಟ್​ ಮಂಡಿಸಲು ಸಾಧ್ಯನಾ ಎಂದು ಟೀಕಿಸಿದ್ದವರು ಇವತ್ತು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಮುಖ್ಯಮಂತ್ರಿಗಳು ಕನಕದಾಸರ ಹಾದಿಯಲ್ಲಿ ಅಧಿಕಾರ ನಡೆಸುತ್ತಿದ್ದು, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಹೇಳಿದರು.

ನಗರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆ ಎದುರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾ ಕುರುಬರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ 537ನೇ ಕನಕದಾಸ ಜಯಂತಿಯಲ್ಲಿ ಮಾತನಾಡಿ,ರಾಜ್ಯದಲ್ಲಿ ಉತ್ತಮ ಸರ್ಕಾರ ನಡೆಸಲಾಗುತ್ತಿದೆ, ಚುನಾವಣೆಗೂ ಮುನ್ನ ನೀಡಿದ 5 ಗ್ಯಾರಂಟಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಕಾರಣ. ಪ್ರತಿ ವರ್ಷ 59 ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಅದೇ ರೀತಿ ಹಿಂದೆ ನಾನು ಶಾಸಕನಾಗಲು ಸಿದ್ದರಾಮಯ್ಯ ಸಹಾಯ ಮಾಡಿದರು. ಹಾಗೆಯೇ ಕೊತ್ತೂರು ಮಂಜುನಾಥ್​, ಕೆ. ಎಚ್​. ಮುನಿಯಪ್ಪ, ಅನಿಲ್​ಕುಮಾರ್​, ನಸೀರ್​ ಅಹ್ಮದ್​ ಅವರಿಗೂ ಸಹಾಯ ಮಾಡಿದರು. ಅವರು ಒಂದು ಜಾತಿಗೆ ಸೀಮಿತವಲ್ಲ ಎಂದರು.

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್​, ಸಂಸದ ಎಂ.ಮಲ್ಲೇಶ್​ ಬಾಬು, ಎಂಎಲ್ಸಿಗಳಾದ ಎಂ.ಎಲ್​.ಅನಿಲ್​ ಕುಮಾರ್​, ಇಂಚರ ಗೋವಿಂದರಾಜು, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್​, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಜಿಲ್ಲಾಧಿಕಾರಿ ಅಕ್ರಂಪಾಷಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್​, ಕೆಜಿಎಫ್​ ಪೊಲೀಸ್​ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಮೈತ್ರಿ, ತಹಸೀಲ್ದಾರ್​ ನಯನಾ, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ಮುಖಂಡರಾದ ಪ್ರಸಾದ ಬಾಬು, ವಕ್ಕಲೇರಿ ರಾಜಪ್ಪ ಇದ್ದರು.

ಕುರುಬ ಸಮಾಜ ಹಾಲಿನಷ್ಟು ಪರಿಶುದ್ಧ: ದಾರ್ಶನಿಕ ಕವಿ ಕನಕದಾಸ, ದೇಶದ ಏಕೈಕ ಮಹಾಚೇತನ, ಅವರು ನಾಡಿಗೆ ನೀಡಿದ ಹಲವು ವಿಚಾರಗಳ ಮೂಲಕ ಎಲ್ಲರ ಮನಸ್ಸುಗಳಲ್ಲಿ ನೆಲೆಸಿದ್ದಾರೆ. ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಕೀರ್ತನೆಗಳು ಎಲ್ಲರಿಗೂ ಸ್ಫೂರ್ತಿ ಆಗಬೇಕು. ಕುರುಬ ಸಮುದಾಯ ಎಂದರೆ ಹಾಲು ಮತಸ್ಥರು. ಹಾಲಿನಷ್ಟು ಪರಿಶುದ್ಧ. ಮೋಸ ಗೊತ್ತಿಲ್ಲ, ನಾವು ಎಲ್ಲರೊಂದಿಗೂ ಬೆರೆಯೋಣ ಎಂದು ಬೈರತಿ ಸುರೇಶ್​ ಕಿವಿಮಾತು ಹೇಳಿದರು.

ತಂಬೂರಿ ಸಮುದಾಯದ ಅಸ್ತ್ರ: ಕೋಲಾರಕ್ಕೆ ವೈದ್ಯಕಿಯ ಕಾಲೇಜು ಸಿಕ್ಕಿದ್ದು, 21 ಎಕರೆಯಲ್ಲಿ ಕಾಲೇಜು ನಿರ್ಮಾಣವಾಗಲಿದೆ. ಹೀಗಾಗಿ, ಇಲ್ಲಿ ಕನಕ ಮೂರ್ತಿ ಸ್ಥಾಪನೆ ಮಾಡಿಲ್ಲ. ಅತಿಥಿ ಗೃಹ ಬೇರೆಡೆಗೆ ಹೋಗುತ್ತದೆ. ಶ್ರೀ ವೈದ್ಯಕಿಯ ಕಾಲೇಜು ಸ್ಥಾಪನೆ ಮಾಡಬೇಕು. ಕನಸದಾಸರು ಕೈಯಲ್ಲಿ ಇಟ್ಟುಕೊಂಡಿರುವ ತಂಬೂರಿ ನಮ್ಮ ಸಮುದಾಯದ ಪ್ರಮುಖ ಅಸ್ತ್ರ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಸ್ಮರಿಸಿದರು.

ಯುದ್ಧದಲ್ಲಿ ಸಿದ್ದರಾಮಯ್ಯಗೆ ಗೆಲುವು: ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್​ ಮಾತನಾಡಿ, ಕಲಿಯುಗದಲ್ಲಿ ನಡೆಯುತ್ತಿರುವ ಧರ್ಮದ ಯುದ್ಧದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ. ಹಾಗಂತ ನಾನೇನು ಕಾಂಗ್ರೆಸ್​ಗೆ ಹೋಗಲ್ಲ. ನಾನು ಜಾತಿ ಪ್ರೇಮಿಯಷ್ಟೇ. ಲೋಕಾಯುಕ್ತ ನ್ಯಾಯಾಲಯದಲ್ಲಿ ಕ್ಲೀನ್​ ಚಿಟ್​ ಸಿಗುತ್ತದೆ ಎಂದು ಭವಿಷ್ಯ ನುಡಿದರು. ನಾನು ಯಾರಿಗೂ ಕೇರ್​ ಮಾಡಲ್ಲ. ನನಗೆ ಬೇಕಿರುವುದು ಜಾತಿ ಮಾತ್ರ. ಈಚೆಗಿನ ರಾಜಕೀಯ ಬೇಸರ ತರಿಸಿದೆ. ಸಿದ್ದರಾಮಯ್ಯ ಪತ್ನಿ ಮೇಲೆ ಆರೋಪ ಬೇಸರ ತರಿಸಿದೆ. ಸಿದ್ದರಾಮಯ್ಯ ಅವರಿಗೆ ಸ್ವಂತ ಮನೆ ಇಲ್ಲ. ಇನ್ನು ಸೈಟ್​ ತಿಂತಾರಾ?, ಅಣ್ಣತಮ್ಮಂದಿರು ಚಡ್ಡಿಯಲ್ಲಿ ಇರುತ್ತಾರೆ. ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್​, ಅವರು ಬಿಟ್ಟರೆ ಕಾಂಗ್ರೆಸ್​ ಇಲ್ಲ ಎಂದರು. ಸಿದ್ದರಾಮಯ್ಯ ಅವರನ್ನು ಮಾಜಿ ಸಂಸದ ಎಸ್​.ಮುನಿಸ್ವಾಮಿ ಬೈಯ್ಯುತ್ತಾರೆ. ಈಗಿನ ಸಂಸದರು ಪರವಾಗಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳಿವೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಸ್ತಬ್ಧ ಚಿತ್ರಗಳ ಮೆರವಣಿಗೆ: ಕಾರ್ಯಕ್ರಮದ ನಂತರ ಕನಕದಾಸರ ಭಾವಚಿತ್ರಗಳಿದ್ದ ಪಲ್ಲಕ್ಕಿಗಳು, ಸ್ತಬ್ಧಚಿತ್ರಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಚಾಲನೆ ನೀಡಿದರು. ನಗರದ ಕನಕ ಮಂದಿರ ಮುಂಭಾಗದಿಂದ ಡೂಂಲೈಟ್​ ವೃತ್ತ, ಎಂಜಿ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮಾಜಿ ಸಂಸದ ಎಸ್​.ಮುನಿಸ್ವಾಮಿ ತಮಟೆ ಸದ್ದಿಗೆ ನೃತ್ಯ ಮಾಡಿದರೆ, ಶಾಸಕ ಕೊತ್ತೂರು ಮಂಜುನಾಥ್​ ಪಲ್ಲಕ್ಕಿಯಿದ್ದ ಟ್ರ್ಯಾಕ್ಟರ್​ ಚಾಲನೆ ಮಾಡಿ ಗಮನಸೆಳೆದರು. ಕೀಲು ಕುದುರೆ, ಹುಲಿ ಕುಣಿತ, ಡೊಳ್ಳು ಕುಣಿತ, ತಮಟೆ ವಾದನಗಳು ಮೆರವಣಿಗೆಗೆ ಮೆರಗು ನೀಡಿತು. ಇದೇ ಸಂದರ್ಭದಲ್ಲಿ ತೆಂಗಿನ ಪವಾಡವೂ ನಡೆಯಿತು.

ಹಾಸ್ಟೆಲ್​ ನಿರ್ಮಾಣಕ್ಕೆ ಕೈಜೋಡಿಸಿ: ಕೋಲಾರದಲ್ಲಿ ನಿರ್ಮಿಸುತ್ತಿರುವ ಕುರುಬ ಸಮುದಾಯದ ಹಾಸ್ಟೆಲ್​ ಕಟ್ಟಡಕ್ಕೆ 2 ಕೋಟಿ ರೂ. ಘೋಷಿಸಲಾಗಿದ್ದು ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದೆ. ಸಮುದಾಯಕ್ಕೆ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ. ಎಲ್ಲ ಶಾಸಕರು, ಸಂಸದರೂ ಹಣ ನೀಡಿ ಕೈಜೋಡಿಸಬೇಕು ಎಂದು ಸಚಿವ ಬೈರತಿ ಸುರೇಶ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net