ಸಿಎಂ ಎದುರು ಅಧಿಕೃತ ಹಕ್ಕೊತ್ತಾಯ; ಶರಾವತಿ ಸಂತ್ರಸ್ತರ ಸಮಸ್ಯೆ ಮನವರಿಕೆ: ಶಾಸಕ ಹರತಾಳು ಹಾಲಪ್ಪ

WEB
Published on

ಹೊಸನಗರ: ಶರಾವತಿ ಸಂತ್ರಸ್ತರ ಡಿನೋಟಿಫಿಕೇಷನ್ ಮತ್ತು ಮುಳುಗಡೆ ಪ್ರದೇಶದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಹಕ್ಕೊತ್ತಾಯ ಮಂಡಿಸುವುದಾಗಿ ಶಾಸಕ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಈಗಾಗಲೇ ಶರಾವತಿ ಸಂತ್ರಸ್ತರ ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವರ ಗಮನವನ್ನೂ ಸೆಳೆಯಲಾಗಿದೆ. ಅಲ್ಲದೆ ಮಾಜಿ ಸಿಎಂ ಯಡಿಯೂರಪ್ಪ ಜತೆಗೂ ಮಾತನಾಡಲಾಗಿದೆ ಎಂದರು.

ತೀರ್ಥಹಳ್ಳಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಭಾನುವಾರ ಮಧ್ಯಾಹ್ನ ಸಮಯ ನಿಗದಿಯಾಗಿದೆ. ಸಂತ್ರಸ್ತರು ಮತ್ತು ರೈತರು ಕೂಡ ಆಗಮಿಸಲಿದ್ದು, ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫಿಕೇಷನ್ ಮತ್ತು ಮುಳುಗಡೆ ಸಮಸ್ಯೆಗಳ ಬಗ್ಗೆ ಅಧಿಕೃತವಾಗಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

ಮುಳುಗಡೆ ಇದ್ದಲ್ಲಿಗೆ ಬಾರದ ಪ್ರತಿಪಕ್ಷದವರು ಪಕ್ಷದ ಸಂಘಟನೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಮುಳುಗಡೆ ರೈತರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ 60 ವರ್ಷ ಏನು ಮಾಡಿದ್ದಾರೆ ಹೇಳಬೇಕು. ಇಷ್ಟು ವರ್ಷ ಯಾವ ಸರ್ಕಾರ ಅಧಿಕಾರದಲ್ಲಿತ್ತು? ಮುಳುಗಡೆಯಾದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದನ್ನು ಅವರೇ ಹೇಳಬೇಕು ಎಂದು ತಿರುಗೇಟು ನೀಡಿದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡುವ ವೇಳೆ 20 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದನ್ನೇ ದೊಡ್ಡ ವಿಷಯ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿಲ್ಲ. ಆದರೂ ದೆಹಲಿ ಮಟ್ಟಕ್ಕೆ ವಿಚಾರ ಕೊಂಡೊಯ್ಯುವುದಾಗಿ ಹೇಳಿದ್ದರು. ಆ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಬಗ್ಗೆ ಬಾಲಿಶವಾಗಿ ಮಾತನಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net