

ಹಿರಿಯ ನಾಯಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ವೀಕ್ಷಣೆಗೆ ನಗರದ ಕೆಲ ಕಡೆ ಎಲ್‌ಇಡಿ ಬೃಹತ್ ಪರದೆ ಮೂಲಕ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ನಾಗಭೂಷಣ್ ಮತ್ತು ಅವರ ಕುಟುಂಬಸ್ಥರು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು.
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಹೆಸರಿನಲ್ಲಿ ಅರ್ಚನೆ ಮಾಡಿಸುವ ಮೂಲಕ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಧ್ರುವಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಸಾರ್ವಜನಿಕರಿಗೆ ಬಿಸಿಬೇಳೆ ಬಾತು, ಮೊಸರನ್ನ, ಲಾಡು ವಿತರಿಸಲಾಯಿತು. 23ನೇ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ವೀಕ್ಷಿಸಲು ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಮತ್ತು ಕೃಷ್ಣರಾಜ ಯುವಕರ ಬಳಗದ ವತಿಯಿಂದ ನಂಜುಮಳಿಗೆಯಲ್ಲಿ ಸಾರ್ವಜನಿಕವಾಗಿ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ನೂರಾರು ಜನರು ರಸ್ತೆ ಬದಿಯಲ್ಲಿ ನಿಂತು ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಎಲ್ಲರಿಗೂ ಮೈಸೂರ್ ಪಾಕ್ ಮತ್ತು ಬಾದಾಮಿ ಹಾಲು ವಿತರಿಸಲಾಯಿತು. ಸಿದ್ದರಾಮಯ್ಯ ಅವರ ಪರ ಜೈಕಾರದ ಘೋಷಣೆಯನ್ನು ಕೂಗಲಾಯಿತು.
ಅಭಿಮಾನಿಗಳಾದ ಬಸವರಾಜ ಬಸಪ್ಪ, ತೀರ್ಥಕುಮಾರ್, ಮಂಜುನಾಥ್, ಮಂಜಪ್ಪ, ನವೀನ್ ಕೆಂಪಿ, ಶಿವಕುಮಾರ್, ಪ್ರೇಮ್ ಕುಮಾರ್, ಶ್ರೀನಿವಾಸ್, ಎಸ್.ಎನ್.ರಾಜೇಶ್, ರಾಕೇಶ್, ಪಾಂಡು ಇತರರು ಇದ್ದರು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಇರುವ ಶ್ರೀ ಮಹಾಲಕ್ಷ್ಮೀ ಕೊಲ್ಲಾಪುರದಮ್ಮ ದೇವಾಲಯದ ಸಮಿತಿಯಿಂದ ಸಿದ್ದರಾಮಯ್ಯ ಹೆಸರಿನಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಬಾತು, ಮೊಸರನ್ನ ಮತ್ತು ಕೇಸರಿಬಾತು ವಿತರಿಸಲಾಯಿತು. ದೇವಸ್ಥಾನದ ಅಧ್ಯಕ್ಷರಾದ ನಾಗರಾಜು ಹಾಗೂ ಸದಸ್ಯರಾದ ಜಗದೀಶ್, ಮಹದೇವು, ಜವರಪ್ಪ, ಸುಬ್ರಹ್ಮಣ್ಯ( ಸುಬ್ಬು ) ಇತರರು ಇದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಹಾಗೂ ಜಮೀರ್ ಅಹಮದ್ ಖಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಸಿದ್ದರಾಮಯ್ಯ-ಜಮೀರ್ ಅಹಮದ್ ಖಾನ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಸಿಹಿ ವಿತರಿಸಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.