ಸಿಎಂ ಆಗಲು ಗುರುಬಲ ಬೇಕು

satish jarakiholi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಖ್ಯಮಂತ್ರಿಯಾಗಲು ಗುರುಬಲ, ತಾರಾ ಬಲ ಕೂಡಿ ಬರಬೇಕು. ಶನಿಕಾಟವೂ ಕಡಿಮೆಯಾಗಬೇಕು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ ಕೂಡಿ ಬರುವ ತನಕ ನಮ್ಮೆಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯಲಿದೆ ಎಂಬ ಕ್ರಾಂತಿ ವಿಚಾರ ನನಗೆ ಗೊತ್ತಿಲ್ಲ. ಸಚಿವ ರಾಜಣ್ಣ ಅವರನ್ನು ಭೇಟಿ ಮಾಡಿದಾಗ ಈ ಬಗ್ಗೆ ವಿಚಾರಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು ಎಂದು ವ್ಯಂಗ್ಯವಾಡಿದರು.

ಸದ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿಲ್ಲ. ನಿಗಮ-ಮಂಡಳಿಗಳಿಗೆ ನೇಮಕ ಮಾಡಬೇಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಪರವಾನಗಿ ಪಡೆಯಬೇಕಾಗುತ್ತದೆ. ಹಾಗಾಗಿ ಅವರು ವಾರಕ್ಕೊಮ್ಮೆ ದೆಹಲಿಗೆ ಹೋದರೂ ಅದು ಕಡಿಮೆಯೇ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಯಾವುದೇ ತುರ್ತು ಇಲ್ಲ. ನಮ್ಮ ಅಭಿಪ್ರಾಯ ನಾವು ಹೇಳಬಹುದು. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿಲ್ಲ. ವನ್ಯಜೀವಿ ಮಂಡಳಿಯಿಂದ ಪರವಾನಗಿ ಕೊಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಮಾಡಬೇಕು. ಅದನ್ನು ಬಿಟ್ಟು, ಹಿಂದೆ ಕಾಂಗ್ರೆಸ್ ಹಾಗೆ ಮಾಡಿತ್ತು, ಹೀಗೆ ಮಾಡಿತ್ತು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದೆ. ರಸಗೊಬ್ಬರ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಹಂಚಿಕೆ ಮಾತ್ರ ರಾಜ್ಯ ಸರ್ಕಾರದ್ದಾಗಿದೆ. ಎರಡೂ ಸರ್ಕಾರಗಳು ಕೂಡಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net