

ಕೊರಟಗೆರೆ : ನಾನು ರಾಜ್ಯದ ಮುಖ್ಯ ಮಂತ್ರಿಯಾಬೇಕು ಎಂದು ಕೂಗಬೇಡಿ. ನೀವು ಕ್ಷೇತ್ರದಲ್ಲಿ ಕೂಗಿದರೆ ನನ್ನ ವಿರುದ್ಧ ಒಳ ಸಂಚು ಶುರುವಾಗುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶನಿವಾರ ಅಂದಾಜು 5 ಕೋಟಿ ರೂಪಾಯಿ ವೆಚ್ಚದ 17 ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರ ಜನರು ನನ್ನ ಮೇಲೆ ವಿಶ್ವಾಸಕ್ಕೆ ಪ್ರೀತಿಗೆ ಅಭಿಮಾನಕ್ಕೆ ಮುಖ್ಯಮಂತ್ರಿಯಾಗಲಿ ಎಂದು ಕೂಗುತ್ತೀರಾ. ಅದು ನಮ್ಮ ಕೈಯಲ್ಲಿ ಇಲ,್ಲ ಪಕ್ಷದ ವರಿಷ್ಠರು ಶಾಸಕರು ಸೇರಿ ಹಲವು ಹಂತಗಳಲ್ಲಿ ನಡೆಯುವ ಕೆಲಸ ಎಂದರು.
ಸಮ್ಮಿಶ್ರ ಸರ್ಕಾರ ನೀಡಿದ ಆಶ್ರಯ ಮನೆಗಳಿಗೆ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿದೆ. ಆದರೆ, ಬಿಜೆಪಿ ಸರ್ಕಾರದಿಂದ ಹೊಸ ಮನೆ ಬಿಡುಗಡೆ ಮಾಡಿಲ್ಲ. ವಿಧಾನಸಭೆಯಲ್ಲಿ ಒತ್ತಡ ಹಾಕಿದ ಮೇಲೆ ಸರ್ಕಾರ ಪ್ರತೀ ಪಂಚಾಯಿತಿಗೆ 40 ಮನೆಗಳನ್ನು ನೀಡಿದೆ, ಆದರೆ, ವಸತಿ ಸಚಿವ ವಿ.ಸೋಮಣ್ಣ ಅವರು ನನ್ನ ಮನವಿಗೆ ಸ್ಪಂದಿಸಿ ಕೊರಟಗೆರೆ ಕ್ಷೇತ್ರಕ್ಕೆ 3600 ಮನೆಗಳನ್ನು ವಿಶೇಷ ಆದ್ಯತೆ ಮೇಲೆ ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆಯೂ ನನಗೆ 8 ಸಾವಿರ ಮನೆಗಳನ್ನು ಮಂಜೂರು ವಸತಿ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ತಿಳಿಸುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್,ಅಶ್ವತ್ಥ ನಾರಾಯಣ, ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಹನುಮಂತರಾಯಪ್ಪ, ನ್ಯಾತೇಗೌಡ, ನಜೀರ್, ಸುರೇಶ್, ಸ್ಥಳೀಯ ಮುಖಂಡರು ಇದ್ದರು.
ಆದ್ಯತೆ ಮೇರೆಗೆ ಹಣ ಬಿಡುಗಡೆಗೊಳಿಸಿ : ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಿ. ಇದರಿಂದ ಬಯಲು ಸೀಮೆಯ ಜನರಿಗೆ ನೀರಿನ ನೆರವಾಗುತ್ತದೆ. ನನ್ನ ಕ್ಷೇತ್ರದಲ್ಲಿ 110 ಕೆರೆಗಳು ಈ ಯೋಜನೆಯಲ್ಲಿ ತುಂಬಲಿವೆ, ಅದೇ ರೀತಿಯಾಗಿ ತುಮಕೂರು-ರಾಯದುರ್ಗ-ಬಳ್ಳಾರಿ ರೈಲ್ವೇ ಮಾರ್ಗವೂ ಹಳ್ಳ ಹಿಡಿದಿದೆ, ಯುಪಿಎ ಸರ್ಕಾರದ ಈ ಯೋಜನೆ ಅರ್ಧಕ್ಕೆ ನಿಂತಿರುವುದು ದುರದುಷ್ಟಕರ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ ಯೋಜನೆ ಮಾತ್ರ ಸಕಾರಗೊಂಡಿಲ್ಲ. ಆಂಧ್ರದಲ್ಲಿ ಈ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿ ಹೆಚ್ಚಿನ ಹಣ ಮೇರೆಗೆ ಬಿಡುಗಡೆಗೊಳಿಸಲಿ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ಸರ್ಕಾರದಲ್ಲಿ ಭ್ರಷ್ಟಾಚಾರದ ಕೂಗು ಸಾಕಷ್ಟು ಕೇಳುತ್ತಿದೆ, ಸರ್ಕಾರದ ಕಾಮಗಾರಿ ಮತ್ತು ಕೆಲಸ ನಿರ್ವಹಿಸುವವರು, ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಡಾ.ಜಿ.ಪರಮೇಶ್ವರ್ ಶಾಸಕ