ಸಿಎಂ ಆಗಮನ, ಗ್ರಾಮಕ್ಕೆ ಸಿಂಗಾರದ ಸ್ಪರ್ಶ; ಗುಂಗೀರ್ಲಹಳ್ಳಿಯಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ

10CBP3a
Published on

ಚಿಕ್ಕಬಳ್ಳಾಪುರ: ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಗುಂಗೀರ್ಲಹಳ್ಳಿಯ ಸಿಂಗಾರಗೊಳಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ಮೊದಲು ಎಲ್ಲೆಂದರಲ್ಲಿ ಕಸದ ರಾಶಿ, ಚರಂಡಿಗಳಲ್ಲಿ ತ್ಯಾಜ್ಯ, ರಸ್ತೆಗಳಲ್ಲಿ ಹಸುವಿನ ಸಗಣಿ, ಅಲ್ಲಲ್ಲಿ ಬಿದ್ದಿದ್ದ ಗುಂಡಿಗಳಲ್ಲಿ ಓಡಾಡುವಿಕೆ ಸೇರಿ ಹಲವು ಸಮಸ್ಯೆಗಳು ಗ್ರಾಮಸ್ಥರ ತಲೆ ನೋವಿಗೆ ಕಾರಣವಾಗಿತ್ತು. ಇದರ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕಿವಿಗೊಡುತ್ತಿರಲಿಲ್ಲ. ಇದೀಗ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿ ಹಲವರ ದೃಷ್ಟಿ ಗ್ರಾಮದತ್ತ ನೆಟ್ಟಿದೆ.

ಮಾ.12ರಂದು ಗ್ರಾಮದಲ್ಲಿ ಕಂದಾಯ ದಾಖಲೆ, ಮನೆ ಬಾಗಿಲಿಗೆ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ರಸ್ತೆಗಳ ಸ್ವಚ್ಛತಾ ಕಾರ್ಯ, ಕಸದ ರಾಶಿ ತೆರವು, ಬೃಹತ್ ವೇದಿಕೆ ಸಜ್ಜು, ಅಗತ್ಯವಿರುವೆಡೆ ಆಕರ್ಷಣೆಗೆ ಬಣ್ಣ ಬಳಿಯುವಿಕೆ ಸೇರಿ ಹಲವು ಕೆಲಸಗಳು ಬರದಿಂದ ನಡೆಯುತ್ತಿವೆ. ಸ್ಥಳೀಯ ರೈತರು, ಮಹಿಳೆಯರೊಂದಿಗೆ ಸಂವಾದ ನಡೆಸುವ ಗ್ರಾಮದಲ್ಲಿನ ಅರಳಿಕಟ್ಟೆಯು ಹೊಸ ರೂಪದೊಂದಿಗೆ ಸಿಂಗಾರಗೊಳ್ಳುತ್ತಿದೆ. ಈಗಾಗಲೇ ಕಾರ್ಯಕ್ರಮದ ದಿನದಂದು ಎತ್ತಿನಗಾಡಿಯಲ್ಲಿ ಕರೆದುಕೊಂಡು ಬರುವ ಮೂಲಕ ಸಿಎಂಗೆ ಹಬ್ಬದ ಸಿಂಗಾರ ವಾತಾವರಣದಲ್ಲಿ ಇಲ್ಲಿನ ಗ್ರಾಮೀಣ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಕಸರತ್ತು ನಡೆಸಲಾಗುತ್ತಿದೆ.

ಗುಂಗಿರ್ಲಹಳ್ಳಿಯಲ್ಲಿ 171 ಕುಟುಂಬಗಳಿದ್ದು, 977 ಮಂದಿ ವಾಸವಿದ್ದಾರೆ. ಇಲ್ಲಿ ಕಂದಾಯ ದಾಖಲೆ, ಮನೆ ಬಾಗಿಲಿಗೆ ಯೋಜನೆಯಡಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹಾಗೂ ಇತರ ದಾಖಲೆಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದಕ್ಕೆ ಈಗಾಗಲೇ ಹಂಚಿಕೆಯ ನಿರೀಕ್ಷೆಯ 4,72,371ರ ಪಹಣಿಗಳು, 78,976 ಅಟ್ಲಾಸ್ ಪ್ರತಿಗಳು, 2,07,892 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲೆಗಳನ್ನು ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ. ಮುದ್ರಿತಗೊಂಡ ಸದರಿ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ.

ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿ: ಈಗಾಗಲೇ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆ ನಡೆಸಿ, ಜವಾಬ್ದಾರಿ ವಹಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಸಹ ವಿಡಿಯೋ ಸಂವಾದ ಮೂಲಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಅಗತ್ಯ ಕೆಲಸಗಳ ನಿರ್ವಹಣೆಯ ವೈಖರಿ ಪರಿಶೀಲಿಸುತ್ತಿದ್ದಾರೆ. ಜತೆಗೆ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಯಕರು ಕೈ ಜೋಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಆರ್.ಲತಾ, ಜಿಲ್ಲಾಧಿಕಾರಿ ***** ಕಂದಾಯ ದಾಖಲೆ, ಮನೆ ಬಾಗಿಲಿಗೆ ಯೋಜನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸೇರಿ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ವಿವಿಧ ಇಲಾಖೆಯ ಸಿಬ್ಬಂದಿ ಸ್ವಚ್ಛತೆ ನಿರ್ವಹಣೆ, ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಿಕೆ, ಜನರಿಗೆ ಅಗತ್ಯವಿರುವ ಕಂದಾಯ ದಾಖಲೆಗಳ ಮಾಹಿತಿ ಸಂಗ್ರಹ ಸೇರಿ ಇತರ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಮುನಿರಾಜು, ಸ್ಥಳೀಯ ನಿವಾಸಿ ****** ಗ್ರಾಮಕ್ಕೆ ಮುಖ್ಯಮಂತ್ರಿಗಳು ಸೇರಿ ಅನೇಕ ಗಣ್ಯರು ಆಗಮಿಸುತ್ತಿರುವುದು ಮತ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಾದರೂ ಪ್ರಗತಿದಾಯಕ ಕೆಲಸಗಳಾಗುತ್ತಿರುವುದು ಸಂತಸದ ವಿಚಾರ. ಮಂಜುನಾಥ್, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net