ಸಿಎಂ ಅಭ್ಯರ್ಥಿ ಹೈಕಮಾಂಡ್ ನಿರ್ಧಾರ

1manju2-Web
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು. ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.
Published on

ಬೆಳಗಾವಿ: ಕಾಂಗ್ರೆಸ್‌ನಲ್ಲಿ ಸಿಎಂ ಮತ್ತು ಪಕ್ಷದ ಜಿಲ್ಲಾಧ್ಯಕ್ಷರು ಯಾರಾಗಬೇಕು ಎಂಬುದನ್ನು ಹೈಕಮಾಂಡ್ ಅಂತಿಮ ಮಾಡುತ್ತದೆ. ನಮ್ಮಲ್ಲಿ ಒಳ ಜಗಳವಿಲ್ಲ. ಬಣಗಳೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 2023ರ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿ ಯಾರಾಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಣಯಿಸುತ್ತದೆ. ಹಾಗಾಗಿ ಸದ್ಯ ಆ ವಿಷಯದ ಕುರಿತು ಮಾತನಾಡುವುದು ಅಪ್ರಸ್ತುತ ಎಂದರು.

ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಬಣವಿಲ್ಲ. ರಾಜಕೀಯ ಪಕ್ಷವೆಂದರೆ ಸಣ್ಣ-ಪುಟ್ಟ ಸಮಸ್ಯೆಸಾಮಾನ್ಯ. ಅವುಗಳನ್ನು ಪಕ್ಷದ ನಾಯಕರು ಪರಿಹರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಚುನಾವಣೆಯ ಪೂರ್ವದಲ್ಲಿ ಅಧಿಕಾರದ ಹಂಚಿಕೆ ಕುರಿತು ಚರ್ಚಿಸುವುದು ಸೂಕ್ತವಲ್ಲ ಎಂದರು. ಪಕ್ಷ ಸಂಘಟನೆ, ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಜಿಲ್ಲೆಗೆ ಒಬ್ಬರೇ ಅಧ್ಯಕ್ಷರಾಗುತ್ತಾರೆ. ಇದರಲ್ಲಿ ಯಾವ ಬಣವೂ ಇರುವುದಿಲ್ಲ. ಪಕ್ಷದ ಮುಖಂಡರನ್ನು ಕೇಳಿ ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಾಗುತ್ತಿದೆ. ಬಳಿಕ ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ಬಿಜೆಪಿಗರಿಗಿಲ್ಲ ನೈತಿಕತೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುವ ಮುನ್ನ ತಮ್ಮ ಪಕ್ಷದಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿಕೊಳ್ಳಲಿ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಮೊದಲು ಸವದಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕರೊನಾ ಲಸಿಕೆ ಸಿಗದೆ ಜನರು ಪರದಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ವ್ಯಾಕ್ಸಿನ್ ಸಿಗುತ್ತಿಲ್ಲ. ಆದರೆ, ಬಿಜೆಪಿಯವರು ಲಸಿಕೆ ಲಭ್ಯತೆ ಕುರಿತು ಸುಳ್ಳು ಹೇಳಿಕೆ ನೀಡುತ್ತ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ ಎಂದು ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ರಾಜೇಂದ್ರ ಪಾಟೀಲ ಇದ್ದರು.

ನನ್ನ ಪುತ್ರಿ ಪ್ರಿಯಾಂಕಾ ಚುನಾವಣೆಗೆ ಸ್ಪರ್ಧಿಸುತ್ತಾಳೆ ಎನ್ನುವುದು ಸುಳ್ಳು. ಅವಳಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚರ್ಚಿಸಲಾಗುವುದು. ಈ ವಿಷವೂ ಸದ್ಯ ಅಪ್ರಸ್ತುತ.| ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net