

ಚಿತ್ರದುರ್ಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿ ಕುಲಾಧಿಪತಿ ಹುದ್ದೆಗೆ ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ನೇಮಿಸುವ ರಾಜ್ಯಸರ್ಕಾರದ ನಿರ್ಧಾರ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯಗಳು ಶಿಕ್ಷಣದ ಭಾಗವಾಗಬೇಕೇ ಹೊರತು, ರಾಜಕಾರಣದ ಕೇಂದ್ರಗಳಾಗಬಾರದೆಂಬ ಉದ್ದೇಶದಿಂದ ಸಾಂವಿಧಾನಿಕ ಹುದ್ದೆಯಾದ ವಿವಿಗಳ ಕುಲಾಧಿಪತಿ ಹುದ್ದೆಗೆ ರಾಜ್ಯಪಾಲರನ್ನು ನೇಮಿಸಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ನ. 27ರಂದು ನಡೆಸಿದ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಕುಲಾಧಿಪತಿ ಹುದ್ದೆಗೆ ಮುಖ್ಯಮಂತ್ರಿ ನೇಮಿಸಲು ನಿರ್ಧರಿಸಿದೆ.
ಇದರಿಂದ ವಿಶ್ವವಿದ್ಯಾಲಯಗಳು ರಾಜಕೀಯ ತಾಣವಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ನಡೆ ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವೇಷದ ರಾಜಕಾರಣ ಮಾಡುತ್ತಿರುವಂತೆ ಕಾಣುತ್ತಿದೆ. ಮುಡಾ ಹಗರಣದಲ್ಲಿ ಪ್ರಾಸಿ ಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಿರುದ್ಧ ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಅಧಿಕಾರ ದುರುಪಯೋಗಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ, ಗೋಪಿ, ಆದರ್ಶ, ಚಂದನಾ, ತಿಪ್ಪೇಶ್, ಧನಂಜಯ, ರಾಜು, ಸಂಜು, ಸಂಜಯ್ ಇತರರಿದ್ದರು.