ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಎ ಸೈಟ್‌ಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಯಾವ ಉದ್ದೇಶಕ್ಕೆ ನಿವೇಶನ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಅದನ್ನು ಬಳಕೆ ಮಾಡಲಾಗುತ್ತಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸುವಂತೆ ಮುಡಾ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಪರಿಶೀಲನೆ ಸಮಯದಲ್ಲಿ ನಿಗದಿತ ಉದ್ದೇಶಕ್ಕೆ ಬಳಕೆ ಮಾಡದಿದ್ದರೆ ತಕ್ಷಣ ಅಂತಹ ಸೈಟ್‌ಗಳನ್ನು ವಾಪಸ್ ವಶಕ್ಕೆ ಪಡೆಯಬೇಕು. ಹೊಸ ಬಡಾವಣೆಗಳಿಗೆ ಕಣ್ಣುಮುಚ್ಚಿಕೊಂಡು ಅನುಮತಿ ನೀಡಬಾರದು. ಮೈಸೂರಿನಲ್ಲೂ ಬೆಂಗಳೂರಿನಂತೆ ಅಕ್ರಮ ಮತ್ತು ಅವೈಜ್ಞಾನಿಕ ಬಡಾವಣೆಗಳು ಬೆಳೆಯಲು ಬಿಡಬಾರದು ಎಂದು ಸೂಚಿಸಿದರು.
ಕುಡಿಯುವ ನೀರಿನ ಯೋಜನೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಗರ ಪ್ರದಕ್ಷಿಣೆ ಮಾಡಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಬೇಕು. ಹೆಚ್ಚಿನ ಅನುಮತಿ ಬೇಕಾದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.