ಸಿಎ ಮಾಡಬೇಕು ಎಂಬುದೇ ನನ್ನ ಗುರಿ: ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದ ಗಗನ್ ಗೌಡ ಅಭಿಮತ

08_HSN_07
Published on

ಹಾಸನ: ಸಿಎ (ಚಾರ್ಟೆಡ್ ಅಕೌಂಟೆಂಟ್) ಮಾಡಬೇಕು ಎಂಬುದೇ ನನ್ನ ಗುರಿ ಮತ್ತು ಧ್ಯೇಯ. ಒಂದೇ ಗುರಿ ಇರಿಸಿಕೊಂಡು ಮುನ್ನಡೆದಾಗ ಮಾತ್ರ ಅದರೆಡೆಗೆ ಹೆಚ್ಚು ಆಸಕ್ತಿ ಬೆಳೆದು ಸಫಲರಾಗಲು ಸಾಧ್ಯ ಎಂದು ಹೇಳುತ್ತಾರೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದ ನಗರದ ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿ ಪಿ. ಗಗನ್ ಗೌಡ ಅವರು.

ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ 581 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಗಗನ್ ಗೌಡ ಅವರು ಪತ್ರಿಕೆಯೊಂದಿಗೆ ಮಾತನಾಡಿ, ನಾನು ಇನ್ನು ಎರಡರಿಂದ ಮೂರು ಅಂಕಗಳನ್ನು ನಿರೀಕ್ಷೆ ಮಾಡಿದ್ದೆ. ಆದರೂ ಫಲಿತಾಂಶ ಖುಷಿ ನೀಡಿದೆ. ಆರಂಭದ ದಿನಗಳಲ್ಲಿ ದಿನಕ್ಕೆ ಮೂರು ಗಂಟೆ ಓದಲು ಸಮಯ ಮೀಸಲಿರಿಸಿದ್ದೆ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಓದುವ ಸಮಯವನ್ನು ಹೆಚ್ಚಿಸಿಕೊಂಡೆ. ದಿನದಲ್ಲಿ ಸರಿಸುಮಾರು ಏಳು ಗಂಟೆಗೂ ಹೆಚ್ಚು ಸಮಯ ಓದುತ್ತಿದ್ದೆ ಎಂದು ಹೇಳುತ್ತಾರೆ.

ತರಗತಿಯಲ್ಲಿ ನಡೆಯುವ ಪಾಠಗಳನ್ನು ಆರಂಭದಿಂದಲೂ ಶ್ರದ್ಧೆಯಿಂದ ಕೇಳಿಸಿಕೊಂಡು ಕಲಿಯುತ್ತಿದ್ದೆ. ಅಷ್ಟೇ ಅಲ್ಲದೆ ಪ್ರತಿದಿನ ತರಗತಿಯಲ್ಲಿ ನೀಡುತ್ತಿದ್ದ ಟೆಸ್ಟ್‌ಗಳು ನನ್ನ ಕಲಿಕೆಗೆ ತುಂಬಾ ಅನುಕೂಲವಾಯಿತು. ಇದನ್ನು ಹೊರತುಪಡಿಸಿ ನಾನು ಯಾವುದೇ ಕೋಚಿಂಗ್ ಕ್ಲಾಸ್‌ಗೂ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಕುಳಿತು ಓದುತ್ತಿದ್ದೆ. ಜತೆಗೆ ದಿನಪತ್ರಿಕೆಗಳನ್ನು ಓದುವುದು, ವಾರ್ತೆಗಳನ್ನು ಸಹ ನೋಡುತ್ತಿದ್ದೆ ಎನ್ನುತ್ತಾರೆ.

ಗಗನ್ ಅವರ ಯಶಸ್ಸಿಗೆ ಅವರ ತಂದೆ ಕೆ. ಪ್ರಕಾಶ್ ಹಾಗೂ ತಾಯಿ ಜಿ. ಪೂರ್ಣಿಮಾ ಅವರ ಸಹಕಾರ ಕೂಡ ತುಂಬಾ ಅಪಾರವಾಗಿದೆ ಎನ್ನುತ್ತಾರೆ ಗಗನ್. ನಮ್ಮ ತಂದೆಯವರು ನಗರದಲ್ಲಿ ಟಿಶ್ಯೂ ಪ್ರೊಡ್ಯೂಸ್ ಯೂನಿಟ್ ಹೊಂದಿದ್ದಾರೆ. ತಾಯಿಯೂ ಕೂಡ ಅಲ್ಲಿಯೇ ಕೆಲಸಕ್ಕೆ ಹೋಗುತ್ತಾರೆ. ಅವರು ಎಂದಿಗೂ ನನ್ನ ಮೇಲೆ ಒಂದು ದಿನವೂ ಯಾವುದೇ ರೀತಿಯ ಒತ್ತಡ ಹಾಕಿದವರಲ್ಲ. ನನ್ನ ಇಚ್ಛೆಯಂತೆ ಓದಲು ಸಹಕಾರಿಯಾಗಿದ್ದಾರೆ. ನಮ್ಮ ತಂದೆಯವರೂ ನನಗೆ ಹೇಳುತ್ತಿದ್ದದ್ದು ನಿನ್ನ ಇಚ್ಛೆಯಂತೆ ಓದು. ನಿನಗೆ ಯಾವ ಕೋರ್ಸ್ ಇಷ್ಟವೋ ಅದನ್ನೇ ಓದು ಎಂದು ನನ್ನ ಇಚ್ಛೆಗೆ ಬೆಂಬಲವಾಗಿ ನಿಂತರು. ತಾಯಿಯೂ ಕೂಡ ನನ್ನ ಆರೋಗ್ಯದ ವಿಷಯವಾಗಿ ತುಂಬಾ ಕಾಳಜಿ ವಹಿಸಿದರು ಎಂದು ಪೋಷಕರ ಸಹಕಾರವನ್ನು ಸ್ಮರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net