ಸಿಎ ನಿವೇಶನ ಹಸ್ತಾಂತರ ಯಾವಾಗ?

muda (1)
Published on

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನ (ಸಿಎ) ಹಂಚಿಕೆ ನನೆಗುದಿಗೆ ಬಿದ್ದಿದ್ದು, ಇವುಗಳ ಹಸ್ತಾಂತರ ಯಾವಾಗ..?

ನಗರದ ಸಂಘ-ಸಂಸ್ಥೆಗಳು, ಕಲಾ ತಂಡಗಳ ಪ್ರಶ್ನೆ ಇದು. 2011-12ರಲ್ಲಿ ಶೇ.10ರಷ್ಟು ಮುಂಗಡ ಹಣದೊಂದಿಗೆ ಅರ್ಜಿ ಸಲ್ಲಿಸಲಾಗಿದೆ. ವರ್ಷಗಳೇ ಕಳೆದರೂ ಫಲಾನುಭವಿಗಳಿಗೆ ಈ ನಿವೇಶನ ಮಾತ್ರ ಸಿಕ್ಕಿಲ್ಲ.

ಶಾಲೆ, ಆಸ್ಪತ್ರೆ, ವೃದ್ಧಾಶ್ರಮ, ದೇವಾಲಯ ನಿರ್ಮಾಣ, ಕಲೆ, ಕ್ರೀಡೆ, ಸಾಮಾಜಿಕ ಸೇವೆ, ವೃದ್ಧಾಶ್ರಮ, ಹಾಸ್ಟೆಲ್ ನಿರ್ಮಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಸೇವಾ ಕಾರ್ಯಗಳಿಗೆ ಅನುಗುಣವಾಗಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಲು ಸಿಎ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಅದಕ್ಕಾಗಿ ಮುಡಾದಲ್ಲಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ.

2022ರಲ್ಲೇ ಈ ಉಪಸಮಿತಿಯಿಂದ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲಿಸಿ ಅರ್ಹ ಸಂಘ-ಸಂಸ್ಥೆಗಳಿಗೆ ನಿವೇಶನ ಮಂಜೂರು ಮಾಡಲು ಶಿಫಾರಸು ಮಾಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ನಾಲ್ಕು ವರ್ಷವಾದರೂ ಸಿಎ ಸೈಟ್ ಮಾತ್ರ ಹಂಚಿಕೆಯಾಗಿಲ್ಲ.

ಈ ನಿವೇಶನ ಸಿಗುವ ಆಸೆಯಲ್ಲಿ ಸಾಲ-ಸೋಲ ಮಾಡಿ ಹಣವನ್ನು ಅರ್ಜಿದಾರರು ಪಾವತಿಸಿದ್ದು, ಇದು ಇನ್ನೂ ದೊರೆತಿಲ್ಲ. ಮಾಡಿದ ಸಾಲಕ್ಕೆ ಬಡ್ಡಿ ಪಾವತಿಸಲಾಗದ ಸ್ಥಿತಿಯಲ್ಲಿ ಕಂಗಾಲಾಗಿದ್ದಾರೆ. 50:50 ಅನುಪಾತದ ನಿವೇಶನಗಳ ಹಂಚಿಕೆ ಪ್ರಕರಣ, ಆಡಳಿತ ಮಂಡಳಿ ಪರಿವರ್ತನೆಯಿಂದಾಗಿ ಬಹಳಷ್ಟು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ನಿವೇಶನ ಆಕಾಂಕ್ಷಿಗಳು ಕಣ್ಣೀರು ಸುರಿಸುವಂತಾಗಿದೆ.

370 ಸಿಎ ನಿವೇಶನಗಳು ಹಂಚಿಕೆಗೆ ಕಾಯುತ್ತಿವೆ. ಆದ್ದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿವರ್ತನೆಗೊಂಡಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ತ್ವರಿತಗತಿಯಲ್ಲಿ ಈ ನಿವೇಶನ ಹಂಚಿಕೆ ಕ್ರಮ ತೆಗೆದುಕೊಳ್ಳಬೇಕು. ಸಾಂಸ್ಕೃತಿಕ, ಕ್ರೀಡೆ, ಆರೋಗ್ಯ ಸೇರಿದಂತೆ ವಿವಿಧ ಸೇವಾ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕಿದೆ. ಈ ಕುರಿತು ಸಂಗ್ರಹಿಸಿರುವ ಸಾರ್ವಜನಿಕರ ಅಭಿಪ್ರಾಯಗಳು ಈ ರೀತಿ ಇದೆ.

ಸದ್ಯಕ್ಕೆ ಸಿಎ ನಿವೇಶನಗಳನ್ನು ಸರ್ಕಾರಿ ಉದ್ದೇಶಕ್ಕೆ ಮಾತ್ರ ನೀಡಲಾಗುತ್ತಿದೆ. ಶಾಲೆ, ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಮಾತ್ರ ಇವುಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಸಂಘ, ಸಂಸ್ಥೆಗಳು ಸೇರಿದಂತೆ ಖಾಸಗಿಯವರಿಗೆ ಸಿಎ ನಿವೇಶನ ಹಂಚಿಕೆ ಕುರಿತು ಇನ್ನೂ ನಿರ್ಣಯವಾಗಿಲ್ಲ.

ಕೆ.ಆರ್.ರಕ್ಷಿತ್

ಆಯುಕ್ತ, ಮೈಸೂರು ಅಭಿವೃದ್ಧಿ ಪ್ರಾಧಿಕಾರ

ಶೇ.10ರಷ್ಟು ಹಣ ಪಾವತಿಸಿ 4 ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದು, ನಿವೇಶನ ಹಸ್ತಾಂತರಿಸಿದರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ. ಆದರೆ ಬಹಳಷ್ಟು ತಡವಾಗುತ್ತಿದೆ. ಈ ವಿಷಯದಲ್ಲಿ ಅನ್ಯ ವಿಷಯವನ್ನು ಸೇರ್ಪಡೆ ಮಾಡದೆ ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು

ದೀಪಕ್ ಮೈಸೂರು

ಅಧ್ಯಕ್ಷ ಸಂಚಲನ, ಮೈಸೂರು

ಹಿಂದೆ ಹಂಚಿಕೆಯಾಗಿರುವ ಸಿಎ ನಿವೇಶನಗಳು ಬಹಳಷ್ಟು ದುರ್ಬಳಕೆಯಾಗಿದ್ದು, ಅನ್ಯ ಉದ್ದೇಶಕ್ಕೆ ಬಳಕೆಯಾಗಿವೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಜತೆಗೆ, ಸಮೀಕ್ಷೆ ಮಾಡಿಸಿ ನಿಯಮ ಉಲ್ಲಂಘಿಸಿರುವ ಸಿಎ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಸಹ ತೆಗೆದುಕೊಳ್ಳಬೇಕು.

ದ್ಯಾವಪ್ಪ ನಾಯಕ

ಅಧ್ಯಕ್ಷ, ರಾಜ್ಯ ಅಹಿಂದ ಒಕ್ಕೂಟ

ಬಡ, ಮಧ್ಯವರ್ಗದವರಿಗೆ ಸೂರು ಕಲ್ಪಿಸುವುದು ಮುಡಾ ಮುಖ್ಯ ಕರ್ತವ್ಯ. ಆದರೆ ಈ ಹೊಣೆಗಾರಿಕೆಯಿಂದಲೇ ಅದು ನುಣುಚಿಕೊಳ್ಳುತ್ತಿದೆ. ನಿವೇಶನ, ಮನೆ ನಿರ್ಮಾಣದ ಕುರಿತು ಅದು ಯೋಚಿಸುತ್ತಿಲ್ಲ. ಆ ನಿಟ್ಟಿನಲ್ಲಿ ಗಂಭೀರವಾಗಿ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಈ ರೀತಿಯ ಧೋರಣೆಯಿಂದಲೇ ಅರ್ಜಿ ಸಲ್ಲಿಸಿ 20 ವರ್ಷವಾದರೂ ಇನ್ನೂ ನಮಗೆ ನಿವೇಶನ ದೊರೆತಿಲ್ಲ.

ರಾಣಿ ವೆಂಕಟೇಶ್, ನಿವೇಶನ ಆಕಾಂಕ್ಷಿ

ಸಿಎ ನಿವೇಶನಗಳು ಸಾರ್ವಜನಿಕ ಉದ್ದೇಶಕ್ಕೆ ಮೀಸಲು. ಇವುಗಳನ್ನು ಹಾಗೇ ಇಟ್ಟುಕೊಂಡರೂ ಎಂಡಿಎಗೆ ಏನು ಆದಾಯ ಬರಲ್ಲ. ವಿಳಂಬ ಮಾಡಿದರೂ ಪ್ರಯೋಜನವಾಗಲ್ಲ. ಆದ್ದರಿಂದ ಹಾಸ್ಟೆಲ್, ಶಾಲೆ, ವೃದ್ಧಾಶ್ರಮ, ಸಮುದಾಯ ಭವನ ಸೇರಿದಂತೆ ಇನ್ನಿತರ ಸಾರ್ವಜನಿಕ ಬಳಕೆಗಾಗಿ ಸಿಎ ನಿವೇಶನವನ್ನು ಯಾವುದೇ ಶಿಫಾರಸಿಗೆ ಒಳಗಾಗದೆ, ನಿಯಮಾನುಸಾರ ಹಂಚಿಕೆ ಮಾಡಬೇಕು.

ಆರ್.ರಾಜೀವ್, ಸಾರ್ವಜನಿಕರು

ಸಿಎ ನಿವೇಶನ ಹಂಚಿಕೆಯೂ ಒಂದು ಭ್ರಷ್ಟಾಚಾರದ ಕೂಪವಾಗಿದೆ. ಈ ವಿಷಯದಲ್ಲಿ ಸರ್ಕಾರಿ ಮಾನದಂಡಗಳು ಪಾಲನೆಯಾಗುತ್ತಿಲ್ಲ. ಈ ಮಾನದಂಡಗಳ ಸಾರ್ವಜನಿಕರಿಗೂ ಗೊತ್ತಾಗುತ್ತಿಲ್ಲ. ಆದ್ದರಿಂದ ಹಿಂದೆ ಹಂಚಿಕೆಯಾಗಿರುವ ಸಿಎ ನಿವೇಶನ ವಿಷಯದಲ್ಲಿ ಅಕ್ರಮ ನಡೆದಿರುವ, ನಿಯಮ ಉಲ್ಲಂಘಿಸಿರುವ ಆರೋಪಗಳಿವೆ. ಈ ಕುರಿತು ತನಿಖೆ ಮಾಡಿ ಅಕ್ರಮ ಎಸಗಿರುವ ಸಿಎ ನಿವೇಶನಗಳನ್ನು ವಾಪಸ್ ಪಡೆದುಕೊಳ್ಳಬೇಕು. ಅವುಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಸಾರ್ವಜನಿಕರ ಉದ್ದೇಶಕ್ಕೆ ಬಳಕೆ ಮಾಡಲು ಅರ್ಹರಿಗೆ ಹಂಚಿಕೆ ಮಾಡಬೇಕು.

ಎನ್.ಪುನೀತ್, ವಕೀಲರು

ಮೈಸೂರಲ್ಲಿ ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಮುಡಾಕ್ಕೆ ಬಹಳಷ್ಟು ಜನರು ನಿವೇಶನ ಕೋರಿ ಅರ್ಜಿ ಸಲ್ಲಿಸಿ 2 ದಶಕಗಳಿಂದ ಕಾಯುತ್ತಿದ್ದಾರೆ. ಆ ಪೈಕಿ ಕೆಲವರು ಮೃತಪಟ್ಟಿದ್ದಾರೆ. ಮೈಸೂರಲ್ಲಿ ಒಂದು ನಿವೇಶನ ಹೊಂದಬೇಕೆಂಬ ಬಯಕೆಯೂ ಅವರೊಂದಿಗೆ ಸತ್ತುಹೋಗಿದೆ. ಇದು ಎಂಡಿಎಗೆ ನಾಚಿಕೆಗೇಡಿನ ಸಂಗತಿ. ಕಡಿಮೆ ದರದಲ್ಲಿ ನಿವೇಶನ, ಮನೆ ಸೌಲಭ್ಯವನ್ನು ಕಲ್ಪಿಸಿಕೊಡುವುದು ಮುಡಾದ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ವಹಿಸಬೇಕು.

ಸಿ.ಕೆ.ಮಂಜುನಾಥ

ಸಾರ್ವಜನಿಕ

ಎಂಡಿಎ ಅಧಿಕಾರಿಗಳು ರಿಯಲ್‌ಎಸ್ಟೇಟ್‌ನವರೊಂದಿಗೆ ಶಾಮೀಲಾಗಿ ರೈತರು, ಸಾರ್ವಜನಿಕರನ್ನು ಮೋಸ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕು. ಈ ಸಂಸ್ಥೆಯನ್ನು ಸುಧಾರಣೆ ಮಾಡಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ನಾವು ಸಹ ಸಿಎ ನಿವೇಶನಕ್ಕೆ ಅರ್ಜಿ ಹಾಕಿದ್ದು, ಹಂಚಿಕೆ ಖಾತ್ರಿಯಾಗಿದೆ. ಆದರೆ ನೋಂದಣಿ ಮಾಡಿಕೊಡುತ್ತಿಲ್ಲ. ಇದರಿಂದ ನಮಗೂ ಸೇರಿದಂತೆ ಬಹಳಷ್ಟು ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ.

ಅತ್ತಹಳ್ಳಿ ದೇವರಾಜು

ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net