ಸಿಇಒರಿಂದ 1.56 ಕೋಟಿ ರೂ. ದುರ್ಬಳಕೆ

Published on

ಹನಗೋಡು: ಹನಗೋಡು ಪ್ರಾಥಮಿಕ ಸಹಕಾರ ಪತ್ತಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ 1.56 ಕೋಟಿ ರೂ. ದುರ್ಬಳಕೆ ಮಾಡಿಕೊಂಡು ರೈತರಿಗೆ ಹಾಗೂ ಸಹಕಾರ ಸಂಘಕ್ಕೆ ವಂಚನೆ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಸಂಘದ ಅಧ್ಯಕ್ಷ ರವಿಕುಮಾರ್ (ಹಿಂಡಗುಡ್ಲು ಹನುಮ) ಜ.3 ರಂದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹನಗೋಡು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪುಷ್ಪಕಲಾ ಅವರ ವಿರುದ್ಧ ದೂರು ನೀಡಿದ್ದು, ಎಂಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಬಿ.ಬಿ.ಕೃಷ್ಣ 2024ರ ಅ.24 ಹಾಗೂ ನ. 6 ರಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಕಲಾ ಅವರಿಗೆ ಸಂಘದಲ್ಲಿ ಸುಸ್ತಿಯಾಗಿರುವ ಸಾಲದ ವಿವರದ ಕಡತಗಳನ್ನು ಪರಿಶೀಲನೆಗೆ ಸಲ್ಲಿಸುವಂತೆ ನೊಟೀಸ್ ನೀಡಿದ್ದರೂ ಯಾವುದೇ ದಾಖಲಾತಿ ಹಾಜರುಪಡಿಸಿಲ್ಲ. ಈ ಬಗ್ಗೆ ನನಗೆ ಮಾಹಿತಿ ನೀಡಿದ್ದರಿಂದ ಡಿ.3ರಂದು ನಡೆಸಿದ ನಿರ್ದೇಶಕರ ತುರ್ತು ಸಭೆಯಲ್ಲಿ ಮೇಲ್ವಿಚಾರಕ ಬಿ.ಬಿ.ಕೃಷ್ಣ ಅವರು ನೀಡಿದ್ದ ನೊಟೀಸ್ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಕಲಾ ಅವರು 2024ರ ನ.22ರಿಂದ ಅನಾರೋಗ್ಯದ ನೆಪವೊಡ್ಡಿ ಕರ್ತವ್ಯಕ್ಕೆ ಗೈರಾಗಿದ್ದಾರೆ. 2024ರ ನ. 28ರಂದು ಮಂಡಳಿಯ ತುರ್ತು ಸಭೆ ಕರೆದು ದೂರವಾಣಿ ಮೂಲಕ ಪುಷ್ಪಕಲಾರನ್ನು ಸಂಪರ್ಕಿಸಿ ಸಭೆಗೆ ಹಾಜರಾಗಬೇಕೆಂದು ಸೂಚಿಸಿದಾಗ ಬರುವುದಾಗಿ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ಎಂಡಿಸಿಸಿ ಬ್ಯಾಂಕ್‌ನವರು ನ. 29ರಂದು ಸಂಘದ ನನಗೆ ನೊಟೀಸ್ ನೀಡಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಸಂಘದಲ್ಲಿ ಸುಸ್ತಿಯಾಗಿರುವ ಸಾಲದ ಕಡತಗಳ ಪರಿಶೀಲನೆ ನಡೆಸಲು ಈವರೆಗೂ ಹಾಜರುಪಡಿಸಿಲ್ಲ. ಸುಸ್ತಿ ಹಣ 1.56 ಕೋಟಿ ರೂ. ಬಗ್ಗೆ ಯಾವುದೇ ಮಾಹಿತಿ ನೀಡದ ಪರಿಣಾಮ ಅಗತ್ಯ ಕ್ರಮವಹಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ ಎಂದು ರವಿಕುಮಾರ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net