

ಬೀದರ್: ನಗರದ ಗುರುನಾನಕ್ ಪಬ್ಲಿಕ್ ಸ್ಕೂಲ್ ಪ್ರತಿಭಾವಂತ ವಿದ್ಯಾರ್ಥಿನಿ ಖುಷಿ ಡಾ. ರವೀಂದ್ರ ಭೂರೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕುರ್ಚಿ ಅಲಂಕರಿಸಿ ವಿಶೇಷ ಗೌರವಕ್ಕೆ ಪಾತ್ರಳಾದಳು.
ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ಹತ್ತನೇ ತರಗತಿಯ ಖುಷಿಗೆ ಈ ಅವಕಾಶ ಒಲಿದು ಬಂತು. ವಿವಿಧ 8 ಶಾಲೆಗಳ 9 ಮತ್ತು 10ನೇ ತರಗತಿಯ 27 ವಿದ್ಯಾರ್ಥಿನಿಯರು ಆಗಮಿಸಿದ್ದರು. ಲಾಟರಿಯಲ್ಲಿ ಖುಷಿಗೆ ಸಿಇಒ ಕುರ್ಚಿಗೇರುವ ಅವಕಾಶ ಸಿಕ್ಕಿತು. ಕೆಲಕಾಲ ಖುಷಿ ಸಿಇಒ ಕುರ್ಚಿ ಮೇಲೆ ಕುಳಿತು ಕೆಲಸ ಮಾಡಿ ಗಮನ ಸೆಳೆದಳು. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಉತ್ತೇಜಿಸುವ, ಅವರಲ್ಲಿ ಉದಾತ್ತ ಗುರಿಗೆ ಪ್ರೇರಣೆ ತುಂಬಲು ಪೂರಕವಾಗಿ ಈ ಕಾರ್ಯ ನಡೆಯಿತು.
ಬುಧವಾರ ಶಾಲಾ ಆಡಳಿತ ಮಂಡಳಿಯು ಖುಷಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿತು. ಮುಂಬರುವ ದಿನಗಳಲ್ಲಿ ಖುಷಿ ಚೆನ್ನಾಗಿ ಓದಿ, ಕಾಯಂ ಜಿಪಂ ಸಿಇಒ ಹುದ್ದೇಗರಲಿ ಎಂದು ಶಾಲೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಸದಾಶಯ ವ್ಯಕ್ತಪಡಿಸಿದರು. ಖುಷಿಗೆ ಸಿಕ್ಕ ಅವಕಾಶ ಅದ್ಭುತ. ಈ ಸಾಧನೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನ, ಪ್ರೋತ್ಸಾಹ ಮುಖ್ಯ ಕಾರಣ ಎಂದರು.
ಪ್ರಾಂಶುಪಾಲ ಎನ್.ರಾಜು, ಶಿಕ್ಷಕರಾದ ಮನೋಹರ ಮೂಳೆ, ರಾಜು ಪ್ರಕಾಶ ಇತರರಿದ್ದರು.