ಸಿಆರ್‌ಪಿಎಫ್ ಸಿಬ್ಬಂದಿಗೆ ಪಿಂಚಣಿ ಸಿಗಲಿ: ಕೆ. ಆರ್ಕೇಶ್

27_HSN_05
ನಗರದ ಹೊರವಲಯದ ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿಆರ್‌ಪಿಎಫ್ 85ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕೆ. ಆರ್ಕೇಶ್ ಉದ್ಘಾಟಿಸಿದರು.
Published on


ಹಾಸನ: ಸೈನಿಕರಿಗೆ ಸಿಗುತ್ತಿರುವ ಸೌಲಭ್ಯಗಳಲ್ಲಿ ಒಂದು ಸಣ್ಣ ಭಾಗವು ಸಿಆರ್‌ಪಿಎಫ್ ಸಿಬ್ಬಂದಿಗೆ ಸಿಗದೆ ಇರುವುದು ನೋವಿನ ಸಂಗತಿ. ಸರ್ಕಾರ ಈ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಅವರಿಗೆ ಮೂಲಭೂತವಾಗಿ ಸಿಗಬೇಕಾಗಿರುವ ಪಿಂಚಣಿ ಸಿಗುತ್ತಿಲ್ಲ ಎಂದು ಸಿಆರ್‌ಪಿಎಫ್ ನಿವೃತ್ತ ಮಹಾನಿರೀಕ್ಷಕ ಹಾಗೂ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ. ಆರ್ಕೇಶ್ ಬೇಸರ ವ್ಯಕ್ತಪಡಿಸಿದರು.

ನಗರದ ಹೊರವಲಯದ ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿಆರ್‌ಪಿಎಫ್ 85ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೆಮಿ ಮಿಲ್ಟ್ರಿ ಸೈನಿಕ್ ಬೋರ್ಡ್ ಸ್ಥಾಪಿಸಿ ಪ್ರತಿ ರಾಜ್ಯದಲ್ಲೂ ಸೈನಿಕರಿಗೆ ಸಲ್ಲಬೇಕಾಗಿರುವ ಸೌಲಭ್ಯ, ನಿವೃತ್ತಿ ನಂತರ ಸಲ್ಲಬೇಕಾಗಿರುವ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಬ್ರಿಟಿಷ್ ಕಾಲದಲ್ಲಿ ಆರಂಭವಾದ ಸಿಆರ್‌ಪಿಎಫ್ ಇಂದು ಬೃಹತಕಾರವಾಗಿ ಬೆಳೆದಿದೆ. ಸ್ವತಂತ್ರ ಭಾರತದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿ ದೇಶದ ಪ್ರಗತಿಯಲ್ಲಿ ಸಹಕಾರ ನೀಡುತ್ತಿದೆ. ಯುದ್ಧ ಕಾಲದಲ್ಲಿ ಸೈನಿಕರ ಜತೆ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಯೋಧರು ದುಡಿದಿದ್ದಾರೆ. 3.5 ಲಕ್ಷ ಸಂಖ್ಯೆ ಇರುವ ಸಿಆರ್‌ಪಿಎಫ್ ಮತ್ತು ಅದರ ಸೋದರ ಸಂಸ್ಥೆಯಾದ ಅಸ್ಸಾಂ ರೈಫಲ್ಸ್, ಬಿಎಸ್‌ಎಫ್, ಸಿಎಎಸ್‌ಎಫ್, ಎಸ್‌ಎಸ್‌ಬಿ ಸೇರಿದಂತೆ ಇತರೆ ಸಂಸ್ಥೆಯ ಸಿಬ್ಬಂದಿ ದೇಶದ ಮೂಲೆ ಮೂಲೆಯಲ್ಲೂ ಸೇವೆ ಸಲ್ಲಿಸುತ್ತಿದೆ. ಸೇನೆಯಲ್ಲಿ ಯೋದರ ಸಂಖ್ಯೆ 15 ಲಕ್ಷದ ಬಲವಿದ್ದರೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಹಾಗೂ ಅರೆ ಮಿಲಿಟರಿ ಪಡೆಗಳಲ್ಲಿ ಸುಮಾರು 10 ಲಕ್ಷ ಸಂಖ್ಯೆ ಇದೆ. ಪ್ರತಿ ಮೂರು ದಿನಕ್ಕೆ ಒಬ್ಬ ಅರೆ ಮಿಲಿಟರಿ ಪೊಲೀಸ್ ಪಡೆಯ ಯೋಧರ ಹುತಾತ್ಮರಾಗುತ್ತಿದ್ದಾರೆ ಎಂದು ತಿಳಿಸಿದರು.

ಬಿಎಸ್‌ಎಫ್ ನಿವೃತ್ತ ಯೋಧ ಎಂ.ಜಿ. ರಮೇಶ್ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸೇನಾ ಮತ್ತು ಅರೆಸೇನಾ ಪಡೆಯ ಕಲ್ಯಾಣ ಮಂಡಳಿ ಮಾಡಿದ್ದರು. ಆದರೆ ಮುಂದೆ ಬಂದ ಮುಖ್ಯಮಂತ್ರಿಗಳು ಅದನ್ನು ರದ್ದು ಮಾಡಿದರು. ಇದಕ್ಕೆ ಕಾರಣ ಗೊತ್ತಿಲ್ಲ. ಈಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾರೆ. ಮತ್ತೆ ಮಂಡಳಿ ಸ್ಥಾಪಿಸಬೇಕು ಎಂದರು.

ಇದೆ ವೇಳೆ ಎಂಸಿಎಫ್ ಡೆಪ್ಯೂಟಿ ಕಮಾಂಡೆಂಟ್ ಅಭಯ ಆನಂದ್ ಪಾಟೀಲ್, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂಪಿಎನ್ ರೆಡ್ಡಿ, ಕಾರ್ಯದರ್ಶಿ ಟಿ.ವಿ. ಗೋಪಾಲ್, ಸಿಐಎಸ್‌ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಶಿವರಾಮ್, ನಿವೃತ್ತ ಯೋಧ ರಮೇಶ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ವಿ. ನಾಗೇಶ್, ಅಧ್ಯಕ್ಷ ಯಶೋಧರ ಮೂರ್ತಿ, ಯೋಧರ ಸಮೂಹದ ಅಧ್ಯಕ್ಷ ಎಚ್. ಕುಮಾರ್, ಶೇಖ್ ನವಾಬ್, ಚೆಲುವೇಗೌಡ, ಹನುಮಂತಪ್ಪ, ಲಿಂಗೇಗೌಡ, ನಾಗಪ್ಪ, ಕೆ.ಬಿ. ಸುರೇಶ್, ನಂದಕುಮಾರ್, ಕಲ್ಪನಾ ಸುರೇಶ್, ಪರಮೇಶ್, ದಿನೇಶ್, ರಾಜನಾಯಕ್, ಬಂಗಾರಿ, ವಸಂತಕುಮಾರ್, ತಾಂಡೇಶ್ವರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net