

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮಮಂದಿರ ಹಾಗೂ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುವಾರ ಜಗದ್ಗುರು ಮಧ್ವಾಚಾರ್ಯರ ಮಧ್ವ ನವಮಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಶ್ರೀರಾಮ ಮಂದಿರದಲ್ಲಿ ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಃ ಚರಣ, ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ ಹಾಗೂ ಪಲ್ಲಕ್ಕಿ ಸೇವೆ ಜರುಗಿದವು.
ಅರ್ಚಕ ಸುಬ್ಬಾ ಶಾಸ್ತ್ರಿ, ವೆಂಕಟೇಶ ಆಚಾರ್ ಕೆಂಗಲ್, ಪ್ರಾಣೇಶ್ ಸಿದ್ರಾಮಪುರ, ವೆಂಕಟರಾವ ಚನ್ನಳ್ಳಿ, ರಾಘವೇಂದ್ರರಾವ್ ಚನ್ನಳ್ಳಿ, ಸತ್ಯನಾರಾಯಣ ಕುಲಕರ್ಣಿ ಇದ್ದರು. ರಾಯರ ಮಠದಲ್ಲಿ ಬೆಳಗ್ಗೆ ಸುಪ್ರಭಾತ, ರಾಯರ ಬೃಂದಾವನಕ್ಕೆ ಪಾರಾಯಣ ಸಮೇತ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ವಿವಿಧ ಭಜನೆ ಮಂಡಳಿಗಳಿಂದ ಭಜನೆ, ರಥೋತ್ಸವ ಜರುಗಿತು.