

ಹುಮನಾಬಾದ್: ಸಿಂಧನಕೇರಾ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಸಾವಿಗೆ ಕಾರಣವಾದ ಪಿಡಿಒ ಸುಗಂಧಾ ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್‌ನಿಂದ ತಾಲೂಕು ಪಂಚಾಯಿತಿ ಕಚೇರಿ ಎದುರು ಸೋಮವಾರ ಧರಣಿ ನಡೆಯಿತು.
ಪ್ಯಾಂಥರ್ ಜಿಲ್ಲಾಧ್ಯಕ್ಷ ವೈಜಿನಾಥ ಸಿಂಧೆ, ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ ಮಾತನಾಡಿ, ಸಾವನ್ನಪ್ಪಿದ ಡೇಟಾ ಎಂಟ್ರಿ ಆಪರೇಟರ್ ಸುಭಾಷ ಅವರಿಗೆ ಎರಡು ವರ್ಷದಿಂದ ಪಿಡಿಒ ಸಾರ್ವಜನಿಕರ ಎದುರು ಹಾಗೂ ಫೋನ್‌ನಲ್ಲಿ ಅವಾಚ್ಯ ಪದಗಳಿಂದ ನಿಂಚಿಸುತ್ತ ಬಂದಿದ್ದಾರೆ. ಅನುದಾನವಿದ್ದರೂ ಸುಮಾರು ೮ ತಿಂಗಳ ಸಂಬಳ ನೀಡಿಲ್ಲ. ತಾಪಂ, ಜಿಪಂ ಅಧಿಕಾರಿಗಳು ಸೂಚಿಸಿದರೂ ವೇತನ ನೀಡದೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ಪಿಡಿಒ ಬಳಸಿದ ಅವಾಚ್ಯ ಶಬ್ದಗಳ ಆಡಿಯೋ ರಿಕಾರ್ಡಿಂಗ್ ಮೃತ ಸುಭಾಷ ಫೋನ್‌ನಲ್ಲಿದೆ. ಮಾನಸಿಕ ಹಿಂಸೆಯಿಂದಲೇ ಮನನೊಂದು ಏ.೧ರಂದು ಸುಭಾಷ ಮರಣ ಹೊಂದಿದ್ದಾರೆ. ಈ ಕುರಿತು ಪಿಡಿಒ ವಿರುದ್ಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಏ.೨ರಂದು ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಧರಣಿ ನಡೆಸಲಾಗುತ್ತಿದೆ. ಶಿಸ್ತು ಕ್ರಮ ಜರುಗಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪಿಡಿಒ ಸುಗಂಧಾ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು. ಮೃತನ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ಜತೆಗೆ ಪರಿವಾರದ ಒಬ್ಬರಿಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ದೀಪಿಕಾ ನಾಯ್ಕರ್ ಅವರು, ಈಗಾಗಲೇ ಪಿಡಿಒ ಬಗ್ಗೆ ಜಿಪಂ ಸಿಇಒಗೆ ವರದಿ ಸಲ್ಲಿಸಲಾಗಿದೆ. ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿ ಮನವಿಪತ್ರ ಸ್ವೀಕರಿಸಿದರು.
ಪ್ರಮುಖರಾದ ಸಿದ್ಧಾರ್ಥ ಡಾಂಗೆ, ಸುಶೀಲಕುಮಾರ ಭೋಲಾ, ಶಿವಾನಂದ ಕಟ್ಟಿ, ಅಶೋಕ ಸಿಂಧೆ, ಮನೋಜ ಜಾನವೀರ, ವಿಠ್ಠಲ್ ಹಾವನಾಯಕ, ಅನಂತ ಮಾಳಗೆ, ಗೌತಮ ಜಾನವೀರ, ವಿಶಾಲ ಸಿಂಧನಕೇರಾ, ಸಿದ್ಧಾರ್ಥ ಜಾನವೀರ, ಮೃತನ ಕುಟುಂಬಸ್ಥರು ಇದ್ದರು.
ಶಾಸಕರು, ಮಾಜಿ ಸಚಿವರ ಭೇಟಿ: ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲï ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲೇಬೇಕು. ಸರ್ಕಾರದ ಗಮನಕ್ಕೆ ತಂದು ಮೃತ ಸುಭಾಷ ಕಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸ್ಥಳದಲ್ಲೇ ಜಿಪಂ ಸಿಇಒ ಜತೆ ಮಾತನಾಡಿ ಪಿಡಿಒ ವಿರುದ್ಧ ಕೂಡಲೇ ಕ್ರಮ ಜರುಗಿಸಲು ಸೂಚಿಸಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಸಹ ಭೇಟಿ ನೀಡಿ, ಮಾನಸಿಕ ಹಿಂಸೆಯಿಂದ ಸುಭಾಷ ಮೃತಪಟ್ಟಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಪಿಡಿಒ ವಿರುದ್ಧ ೨೪ ಗಂಟೆಯೊಳಗೆ ಕ್ರಮ ಕೈಗೊಳ್ಳಲು ಜಿಪಂ ಸಿಇಒಗೆ ಸೂಚಿಸುತ್ತೇವೆ. ಕುಟುಂಬ ಸದಸ್ಯರಿಗೆ ನೌಕರಿ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತು: ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಕಚೇರಿ ಕೆಲಸಕ್ಕೆ ಅನಿಧಿಕೃತ ಗೈರುಹಾಜರಿ ಆರೋಪದ ಮೇರೆಗೆ ಸಿಂಧನಕೇರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಗಂಧಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಸೋಮವಾರ ಆದೇಶ ಹೊರಡಿಸಿದ್ದಾರೆ. ಕಿರುಕುಳದಿಂದ ಗ್ರಾಪಂ ಡೇಟಾ ಎಂಟ್ರಿ ಆಪರೇಟರ್ ಸುಭಾಷ ನಿಧನ ಹೊಂದಿದ್ದು, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಟಗುಪ್ಪ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಮೇಲಧಿಕಾರಿಗಳ ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾದ ಕಾರಣಕ್ಕೆ ಈ ಕ್ರಮ ಜರುಗಿಸಲಾಗಿದೆ.