

ವಿಜಯಪುರ: ಸಿಂದಗಿ ವಿಧಾನ ಸಭೆ ಉಪ ಚುನಾವಣೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಬೊಮ್ಮಾಯಿ ಅವರಿಗೆ ಜೆಸಿಬಿ ಬಳಸಿ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನರ ಅಭೂತ ಪೂರ್ವ ಬೆಂಬಲ ನೋಡಿದರೆ ರಮೇಶ ಭೂಸನೂರ ಗೆಲುವು ಖಚಿತವಾಗಿದೆ. ಈ ಭಾಗದಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದೇನೆ. ಕೋರವಾರ ನೀರಾವರಿಗೆ, ಇಂಡಿ ಶಾಖಾ ಕಾಲುವೆ ವಿಸ್ತರಿಸಿದರೂ ನಂತರ ಬಂದ ಸರ್ಕಾರಕ್ಕೆ ಈವರೆಗೂ ನೀರು ಕೊಡಲಾಗಿಲ್ಲ. ಮಾರ್ಚ ಒಳಗಡೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಸಿಂದಗಿ ಕ್ಷೇತ್ರಕ್ಕೆ 5 ಸಾವಿರ ಮನೆ ನೀಡಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮನೆ ಮಂಜೂರಿಸುವೆ. ಅದಕ್ಕೆಲ್ಲ ನಿಮ್ಮ ಸಹಕಾರ ಬೇಕು ಎಂದರು.
ಕಾಂಗ್ರೆಸ್ ಹತಾಶವಾಗಿದೆ. ಅವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯವೇ ಇಲ್ಲ. ಹೀಗಾಗಿ ಬಿಜೆಪಿ ಗೋಣಿ ಚೀಲದಲ್ಲಿ ಹಣ ಹಂಚುತ್ತಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಣ ಹಂಚುವ ಸಂಸ್ಕೃತಿ ಕಾಂಗ್ರೆಸ್ ನದ್ದು. ಡಿ.ಕೆ. ಶಿವಕುಮಾತ ಬಗ್ಗೆ ಕನಿಕರವಿದೆ. ನಂಜನಗೂಡು, ಕುಂದಗೋಳ ಮುಂತಾದ ಚುನಾವಣೆಯಲ್ಲಿ ಹಣ ಹಂಚಿದರು. ಅದೇ ಅನುಭವ ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಹಣ ಹಾಗೂ ತೋಳ್ಬಲದ ಮೇಲೆ ಗೆದ್ದರು ಎಂದು ಆರೋಪ ಮಾಡಿದರು. ವಿಶೇಷ ಎಂದರೆ ಈ ಹಿಂದಿನ ಚುನಾವಣೆಯಲ್ಲಿ ಸೋತ ಮೇಲೆ ಆರೋಪ ಮಾಡುತ್ತಿದ್ದರು, ಈ ಚುನಾವಣೆಯಲ್ಲಿ ಸೋಲುವ ಮುಂಚೆಯೇ ಮಾತನಾಡುತ್ತಿದ್ದಾರೆ. ಹೀಗಾಗಿ ಇವರು ಸೋಲುವುದಂತೂ ಖಚಿತ ಎಂದರು.
ಈ ಮೊದಲು ಎಂ.ಸಿ. ಮನಗೂಳಿ ಶಾಸಕರಿದ್ದರು. ಅವರು ಹಿರಿಯರಾಗಿದ್ದರು. ಒಳ್ಳೆಯ ಮನುಷ್ಯ. ಆದರೆ, ಈಗ ಯಾವ ಅನುಕಂಪವೂ ಇಲ್ಲ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ,
ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪಕ್ಷಕ್ಕೆ ಯಾವತ್ತೂ ಕ್ಷಮಿಸಬಾರದು ಎಂದರು.
ಸಚಿವರಾದ, ಸಿ.ಸಿ. ಪಾಟೀಲ, ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಸೋಮನಗೌಡ ಪಾಟೀಲಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರಿದ್ದರು.