ಸಿಂಗಸಂದ್ರ ಶಾಲೆ ಸೌಲಭ್ಯದಿಂದ ದೂರ, ಒಂದೇ ಕೊಠಡಿಯಲ್ಲಿ ಪಾಠ, ಅಡುಗೆ, ಬೇಕಿದೆ ಮೂಲಸೌಲಭ್ಯ

IMG20220311110417
Published on

ನವೀನ್ ಚಂದ್ರ ಶೆಟ್ಟಿ ಆನೇಕಲ್

ಗಡಿಭಾಗದ ಸರ್ಕಾರಿ ಶಾಲೆಯ ಉಳಿವಿಗೆ ಕ್ರಮ ಕೈಗೊಳ್ಳಬೇಕಾದ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಪ್ರಾಥಮಿಕ ಶಾಲೆಯೊಂದು ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ವಣಕನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿಂಗಸಂದ್ರ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ. 5 ತರಗತಿಗಳಿಗೂ ಒಂದೇ ಕೊಠಡಿ ಇರುವುದರಿಂದ ಎಲ್ಲ ಮಕ್ಕಳು ಒಟ್ಟಿಗೆ ಕುಳಿತುಕೊಂಡು ಪಾಠ ಕೇಳಬೇಕಾಗಿದೆ. ಇರುವ ಕೊಠಡಿಯಲ್ಲಿಯೇ ಅಡುಗೆಮನೆಯನ್ನೂ ಸಿದ್ಧ ಮಾಡಿ ಇದೇ ಜಾಗದಲ್ಲಿ ಸಿಲಿಂಡರ್ ಹಾಗೂ ಅಡುಗೆ ವಸ್ತುಗಳನ್ನು ಜೋಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿ ಇಟ್ಟಿದ್ದಾರೆ.

ಆನೇಕಲ್ ಪಟ್ಟಣದಿಂದ 3 ಕಿಲೋಮೀಟರ್ ದೂರದಲ್ಲಿರುವ ಸಿಂಗಸಂದ್ರಕ್ಕೆ ಪ್ರತಿ ದಿನ ಬೆಂಗಳೂರಿನಿಂದ ಮಹಿಳಾ ಶಿಕ್ಷಕಿ ಬರುತ್ತಾರೆ. ಸಿಂಗಸಂದ್ರಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಆನೇಕಲ್‌ನಿಂದ ನಡೆದುಕೊಂಡೇ ಬರಬೇಕಿದೆ, ಇದರಿಂದಾಗಿ 3 ತಿಂಗಳಿಗೊಮ್ಮೆ ಶಿಕ್ಷಕಿಯರು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.

ಬಡಮಕ್ಕಳೇ ಹೆಚ್ಚಾಗಿರುವ ಶಾಲೆಗೆ ಮೂಲಸೌಕರ್ಯ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಡಿಭಾಗದ ಬಸ್ ವ್ಯವಸ್ಥೆ ಇಲ್ಲದ ಶಾಲೆಗೆ ಮಹಿಳಾ ಶಿಕ್ಷಕರನ್ನು ನೇಮಕ ಮಾಡಿರುವ ಅವೈಜ್ಞಾನಿಕ ನೀತಿಯನ್ನು ಸರಿಪಡಿಸಿ, ಕಾಡು ರಸ್ತೆಯಲ್ಲಿ ಸಾಗುವಾಗ ಸುರಕ್ಷತೆಯೂ ಮುಖ್ಯವಾಗಿರುವ ಕಾರಣದಿಂದಾಗಿ ಪುರುಷ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಾರಕ್ಕೆ ನಾಲ್ಕೇ ದಿನ ಪಾಠ: ಕಾಡು ಹಾದಿಯಲ್ಲಿ ಸಾಗಬೇಕಿರುವುದರಿಂದ ಶಿಕ್ಷಕರು ಸರಿಯಾದ ರೀತಿಯಲ್ಲಿ ಶಾಲೆಗೆ ಬರುತ್ತಿಲ್ಲ. ವಾರದಲ್ಲಿ ನಾಲ್ಕು ದಿನ ಬರುತ್ತಿರುವುದರಿಂದ ಮಕ್ಕಳ ಶಿಕ್ಷಣ ಹಾಳಾಗುತ್ತಿದೆ. ವಾರದಲ್ಲಿ ಒಂದೆರಡು ದಿನ ರಜೆ ಹಾಕಿದರೂ ಯಾರೂ ಕೇಳುತ್ತಿಲ್ಲ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.

ಮಕ್ಕಳೇ ಶಿಕ್ಷಕರು: ಐದನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಾಲೆಯ ಲೀಡರ್ ಮಾಡಲಾಗಿದೆ. ಶಿಕ್ಷಕಿ ಬರದೇ ಇರುವ ದಿನದಲ್ಲಿ ಈ ವಿದ್ಯಾರ್ಥಿಯೇ ಉಳಿದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾನೆ. ಅಡುಗೆ ಮಾಡುವ ಸಿಬ್ಬಂದಿ ಗ್ರಾಮದವರೇ ಆಗಿರುವುದರಿಂದ ಅವರೇ ಶಾಲೆಯನ್ನು ನಿರ್ವಹಣೆ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಂದು ದಿನ ವಿಳಂಬ ಆಗುತ್ತಿದೆ, ಶಿಕ್ಷಕಿ ತರಗತಿಗೆ ಸರಿಯಾಗಿ ಬರುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಆಗಾಗ ಪರಿಶೀಲನೆ ನಡೆಸುತ್ತೇನೆ. ನರಸಿಂಹ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮದಲ್ಲಿ ಸಾಕಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ, ಆದರೆ ಶಿಕ್ಷಕರೇ ಸರಿಯಾಗಿ ಬರುತ್ತಿಲ್ಲ, ಯಾವುದೇ ಶಿಕ್ಷಕರು ಬಂದರೂ ನಾಲ್ಕು ತಿಂಗಳು ಮಾತ್ರ ಇರುತ್ತಾರೆ. ಸರಿಯಾದ ವ್ಯವಸ್ಥೆ ಕಲ್ಪಿಸಿ, ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕು. ಮಲ್ಲಿಕಾರ್ಜುನ, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net