ಸಿಂಗರಮಾರನಹಳ್ಳಿ ಗ್ರಾಮದ ರೈತರ ಪ್ರತಿಭಟನೆ

HUN-JULY-7-2(SINGARAMARANAHALLI STRIKE)
Published on

ಹುಣಸೂರು: ಸಿಂಗರಮಾರನಹಳ್ಳಿ ಗ್ರಾಮದ ಕೆರೆಗಳನ್ನು ಮರದೂರು ಏತ ನೀರಾವರಿ ಯೋಜನೆಯಡಿ ಸೇರ್ಪಡಗೊಳಿಸಬೇಕು. ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಗರಮಾರನಹಳ್ಳಿ ಗ್ರಾಮದ ರೈತರು ಸತ್ಯ ಎಂಎಎಸ್ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ನಿಗಮದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಮುನೀಗೌಡ, ವೆಂಕಟೇಗೌಡ, ಸಿಂಗ್ರೇಗೌಡ ಮಾತನಾಡಿ, ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ಮರದೂರು ಏತನೀರಾವರಿ ಯೋಜನೆಯಿಂದ 85 ಕೋಟಿ ರೂ.ವೆಚ್ಚದಲ್ಲಿ 49 ಕೆರೆಗಳನ್ನು ತುಂಬಿಸುವ ಕೆಲಸ ಹಾರಂಗಿ ಇಲಾಖೆಯವರು ಕೈಗೆತ್ತಿಕೊಂಡು ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದಾರೆ. ಸಮೀಪದಲ್ಲಿರುವ ಸಿಂಗರಮಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗರಮಾರನಹಳ್ಳಿ ಗ್ರಾಮವನ್ನು ಸೇರ್ಪಡೆಗೊಳಿಸದೆ ಅನ್ಯಾಯವೆಸಗಲಾಗಿದೆ ಎಂದರು.

ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕುಗಳ ಗಡಿ ಗ್ರಾಮವಾಗಿ ಸಿಂಗರಮಾರನಹಳ್ಳಿ ಅತ್ಯಂತ ಹಿಂದುಳಿದಿದೆ. ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮದ ಕೆರೆಗಳಾದ ಸಿದ್ದಮ್ಮನಕಟ್ಟೆ ಕೆರೆ ಸುಮಾರು 5 ಎಕರೆ ವಿಸ್ತೀರ್ಣದಲ್ಲಿದೆ. ಕೆರೆ ಸುಮಾರು 12 ಎಕರೆ ವಿಸ್ತೀರ್ಣದಲ್ಲಿದ್ದು ಕೆರೆಗಳನ್ನು ಏತನೀರಾವರಿ ಯೋಜನೆಯಿಂದ ಕೈ ಬಿಡಲಾಗಿದೆ. ಆದರೆ, ಗರಿಕೆ ಕಟ್ಟೆ ಕೆರೆ ಹಾಗೂ ಇತರೆ 6-7 ಕೆರೆಗಳಿಗೆ ಹನಗೋಡು ಅಣೆಕಟ್ಟೆಯಿಂದ ನೇರವಾಗಿ ಸಣ್ಣನೀರಾವರಿ ಇಲಾಖೆಯಿಂದ ನೀರು ಹರಿದು ಹೋಗುತ್ತಿದೆ. ಅವಶ್ಯಕತೆ ಇಲ್ಲದಿದ್ದರೂ ಮರದೂರು ಏತನೀರಾವರಿ ಯೋಜನೆಯಲ್ಲಿ ಈ ಕೆರೆಗಳನ್ನು ಸೇರ್ಪಡೆಗೊಳಿಸಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಗ್ರಾಮದ ಈ ಕೆರೆಗಳನ್ನು ತುಂಬಿಸುವುದರಿಂದ ಸುಮಾರು 850 ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲಿದೆ. ಸಿಂಗರಮಾರನಹಳ್ಳಿ ಮಾತ್ರವಲ್ಲದೆ ಅಕ್ಕಪಕ್ಕದ ಗ್ರಾಮಗಳಾದ ಸೋನಹಳ್ಳಿ ಹಾಗೂ ಎಚ್.ಡಿ. ಕೋಟೆ ತಾಲೂಕಿನ ಗಂಗಡಹೊಸಹಳ್ಳಿ ಗ್ರಾಮಗಳಿಗೂ ಅನುಕೂಲವಾಗಲಿದೆ. ಸಿಂಗರಮಾರನಹಳ್ಳಿ ಗ್ರಾಮದ ಸಿದ್ದಮ್ಮನಕಟ್ಟೆ, ಕೆರೆ ಒತ್ತುವರಿಯಾಗಿದ್ದು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯ್ ಕುಮಾರ್ ಮನವಿಯನ್ನು ಕೂಡಲೇ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಮುಖಂಡರಾದ ಸಿ.ರವಿಗೌಡ, ಈಶ್ವರೇಗೌಡ. ಎಸ್.ಜಿ.ರಾಮೇಗೌಡ, ಮಂಜೇಗೌಡ, ಕಾಳೇಗೌಡ, ಜವರನಾಯಕ, ಮರುಚ್ಚನಾಯಕ, ಮಂಚನಾಯಕ, ಮಂಜು, ಸಿದ್ದನಾಯಕ, ಚಿಕ್ಕಶೆಟ್ಟಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net