ಸಿಂಗಟಾಲೂರ ಬ್ಯಾರೇಜ್​ನಿಂದ ನೀರು ಹೊರಕ್ಕೆ

8MDG1
Published on

ಮುಂಡರಗಿ: ಮಲೆನಾಡಿನ ವಿವಿಧೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಶನಿವಾರ ಹಮ್ಮಿಗಿ ಬಳಿಯ ಸಿಂಗಟಾಲೂರ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 22 ಗೇಟ್​ಗಳ ಮೂಲಕ 99,835 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಬ್ಯಾರೇಜ್​ನಿಂದ ಆ. 6ರಂದು 64,980 ಕ್ಯೂಸೆಕ್, ಆ. 7ರಂದು 83,837 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಹಿನ್ನೀರಿಗೆ ಮುಳುಗಡೆಯಾದ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಹಾಗೂ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಈವರೆಗೂ ಸ್ಥಳಾಂತರಗೊಳ್ಳದ ಹಿನ್ನೆಲೆಯಲ್ಲಿ ಪ್ರವಾಹದ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕ ಗ್ರಾಮಸ್ಥರಲ್ಲಿ ಶುರುವಾಗಿದೆ.

ಕಾಳಜಿ ಕೇಂದ್ರವನ್ನು ತೆರೆಯಲು ಕ್ರಮ

ಸಿಂಗಟಾಲೂರ ಬ್ಯಾರೇಜ್ ಹಿನ್ನೀರಿಗೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಹಾಗೂ ನದಿಪಾತ್ರದ ಗ್ರಾಮಕ್ಕೆ ತಹಸೀಲ್ದಾರ್ ಆಶಪ್ಪ ಪೂಜಾರ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಜನರಿಗೆ ತಿಳಿವಳಿಕೆ ನೀಡಲಾಗಿದೆ. ಒಂದು ವೇಳೆ ಪ್ರವಾಹ ಸಮಸ್ಯೆಯಾದರೆ ಆಯಾ ಭಾಗದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಕಂದಾಯ ನೀರೀಕ್ಷಕ ಎಚ್.ಎಂ.ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಜೆ.ಬಿ.ಅಮಾತಿ ಇತರರಿದ್ದರು.

ನದಿ ಪಾತ್ರದ ಗ್ರಾಮಗಳ ಪರಿಸ್ಥಿತಿ ಅವಲೋಕನ

ಶಿರಹಟ್ಟಿ: ತುಂಗಭದ್ರಾ ನದಿ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಹೊಳೆಇಟಗಿ, ಸಾಸಲವಾಡ, ತೊಳಲಿ, ಕಲ್ಲಾಗನೂರ ಗ್ರಾಮಕ್ಕೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಶನಿವಾರ ಭೇಟಿ ನೀಡಿ ಪರಿಸ್ಥಿತಿ ಸ್ಥಿತಿ ಅವಲೋಕಿಸಿದರು.

ಒಂದು ವಾರದಿಂದ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದು ಹಾಗೂ ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟಿದ್ದರಿಂದ ದಿನೇ ದಿನೆ ನೀರಿನ ಮಟ್ಟ ಏರುತ್ತಿದೆ. ಮುಂಜಾಗ್ರತೆ ಕ್ರಮವಾಗಿ ನದಿ ಪಾತ್ರದ ಹೊಳೆ ಇಟಗಿ, ಸಾಸಲವಾಡ, ತೊಳಲಿ, ಕಲ್ಲಾಗನೂರ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಎಚ್ಚರಿಕೆಯಿಂದ ಇರಲು ಮುನ್ಸೂಚನೆ ನೀಡಲಾಗಿದೆ. ಆದರೆ, ಸದ್ಯದ ನೀರಿನ ಪ್ರಮಾಣ ನೋಡಿದರೆ ಅಂಥ ಯಾವ ಪ್ರವಾಹದ ಭೀತಿ ಹಾಗೂ ಬೆಳೆ ಜಲಾವೃತವಾಗುವ ಲಕ್ಷಣ ಕಂಡು ಬರುತ್ತಿಲ್ಲ ಎಂದು ತಹಸೀಲ್ದಾರ್ ತಿಳಿಸಿದರು. ಗ್ರಾಪಂ ಪಿಡಿಒ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಕುಸಿದು ಬಿದ್ದ ಮನೆಗಳ ಪರಿಶೀಲನೆ

ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯಿಂದಾಗಿ ತಾಲೂಕಿನಾದ್ಯಂತ ಅಲ್ಲಲ್ಲಿ ಕುಸಿದು ಬಿದ್ದಿರುವ ಮಣ್ಣಿನ ಮನೆಗಳನ್ನು ಶನಿವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪರಿಶೀಲಿಸಿದರು.

ಪಟ್ಟಣದ ದೇಸಾಯಿಬಣ, ಹುಲಗೇರಿಬಣ, ಪೇಠಬಣ ಪ್ರದೇಶ ಮತ್ತು ಸುತ್ತಲಿನ ಶಿಗ್ಲಿ, ಸೂರಣಗಿ, ಅಡರಕಟ್ಟಿ ಸೇರಿ ಗ್ರಾಮೀಣ ಪ್ರದೇಶಗಳಲ್ಲಿನ ತೀರಾ ಹಳೆಯ, ಮಣ್ಣಿನ ಹತ್ತಾರು ಮನೆಗಳು ಕುಸಿದಿವೆ. ಅದರಲ್ಲಿ ಕೆಲವು ಭಾಗಶಃ ಬಿದ್ದಿವೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೂಕ್ತ ದಾಖಲೆ ಸಂಗ್ರಹಿಸಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಕೋರಲಾಗುವುದು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಬಿ.ಎಸ್. ಬಳಗಾನೂರ, ಶ್ರೀಕಾಂತ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net