

ಹಾಸನ : ಹಾಸನ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿ. ಸತ್ಯಭಾಮಾ ಅವರು ಬುಧವಾರ ಅಧಿಕಾರ ಸ್ವೀಕಾರ ಮಾಡಿದರು. ಅಧಿಕಾರ ಸ್ವೀಕಾರ ಮಾಡಿದ ನೂತನ ಜಿಲ್ಲಾಧಿಕಾರಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಹೂ ಗುಚ್ಛ ನೀಡಿ ಸ್ವಾಗತಿಸಿದರು.
ನಂತರ ಮಾತನಾಡಿದ ನೂತನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಕೋಲಾರ ಜಿಲ್ಲಾಧಿಕಾರಿಯಾಗಿ, ಕೆಲಸ ಮಾಡಿರುವ ಅನುಭವ ಇದೆ. ಮುಂದಿನ ದಿನಗಳಲ್ಲಿ ಕೂಡ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರಯೊಂದಿಗೆ ಶ್ರಮಿಸಲಿದ್ದೇನೆ ಎಂದು ಹೇಳಿದರು.
ಮುಂಗಾರು ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಹಾಗೂ ಇನ್ನಿತರ ಬೆಳೆಗಳ ಬಿತ್ತನೆಗೆ ಅಡಚಣೆ ಆಗಿರುವ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಜನಸಮಾನ್ಯರಿಗೆ ಕೈಗೆಟಕುವ ರೀತಿಯಲ್ಲಿ ಕ್ರಮ ವಹಿಸುವುದಾಗಿ ಹೇಳಿದ ಅವರು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ನೂತನ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ವಾರ್ತಾ ಇಲಾಖೆ ಅಧಿಕಾರಿ ವಿನೋಧ ಚಂದ್ರ ಸೇರಿದಂತೆ ಇತರರು ಇದ್ದರು.