ಸಿ.ಟಿ.ರವಿ ಕ್ಷಮೆ ಕೇಳಬೇಕು

Thippeswamy
Published on

ಚಿತ್ರದುರ್ಗ: ಸಚಿವ ಶಿವರಾಜ್ ತಂಗಡಗಿ ಅವರ ತಾಯಿ ಕುರಿತು ಬಿಜೆಪಿ ಮುಖಂಡ ಸಿ.ಟಿ.ರವಿ ಅವಹೇಳನವಾಗಿ ಹೇಳಿಕೆ ನೀಡಿದ್ದು, ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಭೋವಿ ಜಿಲ್ಲಾ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ತಾಯಿಯನ್ನು ದೇವರು-ಗುರುವಾಗಿ ಪೂಜಿಸುತ್ತೇವೆ. ಆದರೆ, ಅವಮಾನಿಸುವ ಸಿ.ಟಿ.ರವಿ ಅವರ ಸಂಸ್ಕೃತಿ ಇದೇನಾ ಎಂದು ಪ್ರಶ್ನಿಸಿದರು.

ಈ ಹೇಳಿಕೆಯಿಂದ ಇಡೀ ಭೋವಿ ಸಮಾಜಕ್ಕೆ ಅತ್ಯಂತ ನೋವುಂಟಾಗಿದೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯದ ಯಾವ ಜಿಲ್ಲೆಗೆ ಹೋದರೂ ಸಮಾಜದವರು ಘೇರಾವ್ ಹಾಕಿ, ಕಪ್ಪುಪಟ್ಟಿ ಪ್ರದರ್ಶಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖಂಡ ಗೋಡೆಮನೆ ಹನುಮಂತಪ್ಪ ಮಾತನಾಡಿ, ಮಾಜಿ ಸಚಿವ ಸಿ.ಟಿ.ರವಿ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳದಿದ್ದರೆ, ರಾಜ್ಯಾದ್ಯಂತ ಹೋರಾಟಕ್ಕೂ ಸಿದ್ಧ ಎಂದರು.

ಸಂಘದ ಖಜಾಂಚಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ಲಕ್ಷ್ಮಣ್, ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net