ಸಿ.ಟಿ. ರವಿ, ಓರ್ವ ನಾಲಾಯಕ್ ರಾಜಕಾರಣಿ: ಎಚ್.ಕೆ. ಮಹೇಶ್

ಸಿ.ಟಿ. ರವಿ, ಓರ್ವ ನಾಲಾಯಕ್ ರಾಜಕಾರಣಿ: ಎಚ್.ಕೆ. ಮಹೇಶ್
Published on

ಹಾಸನ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಓರ್ವ ನಾಲಾಯಕ್ ರಾಜಕಾರಣಿಯಾಗಿದ್ದು ಉಗ್ರಗಾಮಿ ಸಂಘಟನೆ ಅಧ್ಯಕ್ಷರಂತೆ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಪ್ರಚೋದನಾತ್ಮಕ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮತ ಹಾಕಿದರೆ ಹಿಂದೂಗಳ ಸರ್ವನಾಶ ಆಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್, ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿ ದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿದ್ದರಾಮಯ್ಯ ಉಲ್ಲಾಖಾನ್ ಎಂದು ಸಂಬೋ ಧಿಸುವ ಮೂಲಕ ತಮ್ಮ ಕೆಟ್ಟ ರಾಜಕೀಯ ತೋರ್ಪಡಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಹೆಚ್ಚು ಹಿಂದೂಗಳ ಹತ್ಯೆ ನಡೆದಿದೆ ಎಂಬುದನ್ನು ರವಿ ತಿಳಿದುಕೊಳ್ಳಲಿ, ಮಂಗಳೂರಿನ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ಅವರ ಕೊಲೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತಾ ಎಂದು ಪ್ರಶ್ನಿಸಿದರು. ಕಾರ್ಕಳದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ ಯಾದ ನಂತರ ಇದರ ಲಾಭ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಸಿಬಿಐ ತನಿಖೆ ನಂತರ ಉಸಿರುಗಟ್ಟಿಸಿದ್ದರಿಂದ ಆ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ವರದಿ ಬಂದಿದೆ. ಈ ರೀತಿ ಬಿಜೆಪಿ ಅಧಿಕಾರಕ್ಕಾಗಿ ಇಂತಹ ಸಮಾಜ ವಿರೋಧಿ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿದರು. ರವಿ ಪ್ರತಿ ಬಾರಿ ಭಾಷಣ ಮಾಡುವಾಗ ಪ್ರಜ್ಞಾಹೀನತೆ ಕಾಡುವುದರಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಇವರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ ಎಂದರು.

ತೀರ್ಮಾನಕ್ಕೆ ಬದ್ಧ: ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಹೇಳಿದ ಮಹೇಶ್, ಮುಂದೆಯೂ ಸಹ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಪಕ್ಷದ ಗೆಲುವಿಗೆ ಸಹಕಾರ ನೀಡುವುದಾಗಿ ಹೇಳಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ಒಬ್ಬ ಆಕಾಂಕ್ಷಿಯಾಗಿದ್ದೆ, ಆದರೆ ಹಿಂದುಳಿದ ವರ್ಗಕ್ಕೆಅವಕಾಶ ನೀಡುವ ನಿಟ್ಟಿನಲ್ಲಿ ಲಕ್ಷ್ಮಣ್ ಅವರಿಗೆ ಸ್ಥಾನ ದೊರಕಿಸಿ ಕೊಟ್ಟಿದ್ದು ಅನೇಕ ಕಾರ್ಯಕರ್ತರಲ್ಲಿ ಬೇಸರವಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಖಡಾಖಡಿ ಪೀರ್ ಸಾಬ್ ಮಾತನಾಡಿ, ಕಾಂಗ್ರೆಸ್ ನಾಯಕರ ವಿರುದ್ಧ ಕೆಟ್ಟ ಪದಬಳಕೆ ಮಾಡಿರುವ ಸಿಟಿ ರವಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ವಿವಿಧೆಡೆ ನೂರಾರು ಎಕರೆ ಜಮೀನು ಖರೀದಿ:

ಶಾಸಕ ಪ್ರೀತಂಗೌಡ ಅವರು ತಮ್ಮ ಕಡೆಯವರ ಹೆಸರಿನಲ್ಲಿ ಸುಮಾರು 800 ಎಕರೆ ಭೂಮಿ ಖರೀದಿ ಮಾಡಿದ್ದಾರೆ ಎಂದು ಮಹೇಶ್ಆ ರೋಪಿಸಿದರು. ಜಂಟಿ ಸಹಭಾಗಿತ್ವದ ಅಡಿಯಲ್ಲಿ ದೊಡ್ಡ ಕೊಂಡಗೊಳ ವ್ಯಾಪ್ತಿಯಲ್ಲಿ 91 ಎಕರೆ, ಚಿಕ್ಕಗೊಂಡಗೊಳ ಭಾಗದಲ್ಲಿ 40 ಎಕರೆ, ಹಂದಿನಕೆರೆ, ಅರೇಹಳ್ಳಿ ಕಾವಲು ಮೊದಲಾದ ಕಡೆ 100 ಎಕರೆ ಹೀಗೇ ನೂರಾರು ಎಕರೆ ಜಮೀನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದರ ದಾಖಲೆ ಬಿಡುಗಡೆ ಮಾಡುವೆ ಎಂದರು. ಭೂ ಮಾಲೀಕರಿಗೆ ಯಾವುದೇ ಒಪ್ಪಂದ ಪತ್ರ ನೀಡಿಲ್ಲ. ಕೆಲವರಿಂದ ಧಮ್ಕಿ ಹಾಕಿ ಭೂಮಿ ಪಡೆಯಲಾಗಿದೆ ಎಂದು ದೂರಿದರು.


ಸುದ್ದಿಗೋಷ್ಟಿಯಲ್ಲಿ ಖಡಾಖಡಿ ಪೀರ್ ಸಾಬ್, ವಿನೋದ್ ಕುಮಾರ್, ರಾಮಚಂದ್ರ, ಪ್ರಸನ್ನ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net