

ಹಾಸನ: ನಗರದ ವಿಜಯ ಶಾಲೆಯಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಸಿ.ಟಿ. ಮಳಲಿಗೌಡರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಂತರ ಶಾಲಾ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ತಂಡಗಳ ವಿದ್ಯಾರ್ಥಿಗಳಿಗೆ ಐದು ಹಂತಗಳಲ್ಲಿ ಗಣಿತದ ವಿಷಯಕ್ಕೆ ಸಂಬಂಧಿಸಿದ ರಚನಾತ್ಮಕ, ಕ್ರಿಯಾತ್ಮಕ ಮತ್ತು ಮಕ್ಕಳ ಬೌದ್ಧಿಕತೆಯನ್ನು ಒರೆ ಹಚ್ಚುವ ಪ್ರಶ್ನೆಗಳನ್ನು ಕೇಳಲಾಯಿತು.
ಅತಿ ಹೆಚ್ಚು ಅಂಕ ಪಡೆದ ಪಾಂಡಿತ್ಯ ಯುರೋ ಶಾಲೆಯ ವಿದ್ಯಾರ್ಥಿಗಳಾದ ಆರ್ನವ್, ಲೋಕೇಶ ಮತ್ತು ಚಾರ್ವಿ ಪ್ರಶಾಂತ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ನೇತಾಜಿ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಾದ ಕೆ.ಎಂ. ಮಧುರಾ ಭಾರದ್ವಾಜ್ ಮತ್ತು ಡಿ ಆರ್ ದರ್ಶನ್ ತಮ್ಮದಾಗಿಸಿಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಶಂಸನಾ ಪತ್ರ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ.ಎಸ್. ಶ್ರೀ ಲಕ್ಷ್ಮೀ, ಶಾಲಾ ಅಧ್ಯಕ್ಷರಾದ ವೈ. ಎನ್. ಸುಬ್ಬಸ್ವಾಮಿ, ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ, ಪ್ರಾಂಶುಪಾಲ ಕೆ.ಎಸ್. ನಂದೀಶ್, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.