

ಹಾಸನ: ಸಿ.ಎಂ.ಇಬ್ರಾಹಿಂ ಹೇಳಿಕೆ ಹಿಂದೆ ಕಾಂಗ್ರೆಸ್ ಕುತಂತ್ರವಿದೆ. ಆದರೆ ನಾವು ಇದಕ್ಕೆಲ್ಲ ಹೆದರುವುದಿಲ್ಲ. ಅವರು ಕಾಂಗ್ರೆಸ್‌ಗೆ ಹೋಗುವುದಾದರೆ ಹೋಗಲಿ, ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದರು.
ನಗರದ ಸಂಸದರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಇಬ್ಭಾಗ ಆಗಲ್ಲ. ಪಕ್ಷದಲ್ಲಿ 19 ಶಾಸಕರು, 31 ಮಂದಿ ಜಿಲ್ಲಾಧ್ಯಕ್ಷರು ಇದ್ದಾರೆ. ಈ ಬಗ್ಗೆ ಏನು ಮಾಡಬೇಕೆಂದು ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ತೀಮಾನ ತೆಗೆದುಕೊಳ್ಳುತ್ತಾರೆ. ಸಿಎಂ ಇಬ್ರಾಹಿಂ ನಡೆಸಿದ ಸಭೆಯಲ್ಲಿ ಯಾರ‌್ಯಾರು ಇದ್ದರು. ಜೆ.ಎಚ್.ಪಟೇಲ್ ಅವರ ಮಗನನ್ನು ಕೂರಿಸಿಕೊಂಡು ಸಭೆ ನಡೆಸಿದರೆ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ದೇವೇಗೌಡರನ್ನು 60 ವರ್ಷ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂತ ನಮ್ಮ ಜತೆ ಬರುತ್ತಾರೆ. ಕಾಂಗ್ರೆಸ್ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತೆ. ಕಾಂಗ್ರೆಸ್ ಸಿಪಿಎಂ ಮುಗಿಸಿ ಆಯ್ತು, ಈಗ ನಮ್ಮನ್ನು ಮುಗಿಸಲು ಬಂದಿದ್ದಾರೆ. ಪ್ರಸ್ತುತ ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗ ಇಲ್ಲ. ಇಂತಹ ಕಾಂಗ್ರೆಸ್‌ಗೆ ಹೆದರಿದರೆ ಮನೆ ಸೇರಿಕೊಳ್ಳಬೇಕಾಗುತ್ತದೆ. ದೇವೇಗೌಡರು, ಕುಮಾರಸ್ವಾಮಿ ಪಕ್ಷಕ್ಕಾಗಿ ಏನೆಲ್ಲ ತ್ಯಾಗ ಮಾಡಿದ್ದಾರೆ ಎಂಬುದು ಗೊತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದವರು ಯಾರು ಎಂದು ಕೇಳಿದರು.
ಜಿಲ್ಲಾಧಿಕಾರಿ ವಿರುದ್ಧ ಗರಂ
ಜಿಲ್ಲಾಧಿಕಾರಿ ತಾಲೂಕು ಅಧಿಕಾರಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆಸಿಕೊಂಡು ವಾರದಲ್ಲಿ 4 ದಿನ ರಾತ್ರಿ 10 ಗಂಟೆವರೆಗೆಗೂ ಸಭೆ ನಡೆಸುತ್ತಾರೆ. ಹಾಸನಕ್ಕೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿಕೊಳ್ಳುವ ಬದಲು ಇವರೇ ತಾಲೂಕುಗಳಿಗೆ ಭೇಟಿ ನೀಡಲಿ. ಬರ ಪರಿಸ್ಥಿತಿ ಸನ್ನಿವೇಷದಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳು ಜನರ ಕೈಗೆ ಬಿಗಬೇಕು. ಹಾಸನಾಂಬ ಉತ್ಸವಕ್ಕೆ ಕೃಷಿ, ತೋಟಗಾರಿಕೆ, ಕಂದಾಯ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ವಾರದಲ್ಲಿ ನಾಲ್ಕು ದಿನ ತಹಸೀಲ್ದಾರ್, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೂರಿಸಿಕೊಂಡು ಸಭೆ ನಡೆಸುವುದಾದರೆ, ನಾವು ಹೇಗೆ ಕೆಲಸ ಮಾಡಿಸಿಕೊಳ್ಳಬೇಕು. ತಹಸೀಲ್ದಾರ್‌ಗಳನ್ನು ಕೆಲಸ ಮಾಡಲು ಬಿಡಬೇಕು. ಯಾರನ್ನು ಕೇಳಿದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದೆ ಎನ್ನುತ್ತಾರೆ. ಇದನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಗಮನಕ್ಕೆ ತರುತ್ತೇನೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಎದುರು ಅರ್ಧ ರೋಡ್‌ಗೆ ಬ್ಯಾರಿಕೇಡ್ ಹಾಕಿದ್ದು, ಕಚೇರಿಗೆ ಹೋಗಬೇಕು ಎಂದರೆ ಸುತ್ತಾಡಿಕೊಂಡು ಬರಬೇಕಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ಅದನ್ನು ತೆರವುಗೊಳಿಸಿ ಟ್ರಾಫಿಕ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ನಾನೇ ಕಿತ್ತು ಬಿಸಾಡುತ್ತೇನೆ. ಡಿಸಿ ಕಚೇರಿಗೆ ಬರಬೇಕು ಎಂದರೆ ಮೂರು ರೌಂಡ್ ಬಳಸಿಕೊಂಡು ಬರಬೇಕು. ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಎಂಎಫ್ ಮೂಲಕ ಮೆಕ್ಕೆ ಜೋಳ, ತೆಂಗಿನಕಾಯಿ, ಕೊಬ್ಬರಿಯನ್ನು ನಫೆಡ್‌ನಿಂದ ಖರೀದಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ಸಾವಿರ ಈಡುಗಾಯಿ ಒಡೆದು ಪ್ರತಿಭಟನೆ ನಡೆಸುತ್ತೇನೆ. ಈ ರಾಜ್ಯ ಲೂಟಿಕೋರರ ಕೈಗೆ ಸೇರಿದೆ, ಈ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಜಿಲ್ಲೆಯಲ್ಲಿರುವ ಪ್ರತಿಯೊಂದು ದೇವರಿಗೆ ತಲಾ 101ರಂತೆ ಈಡುಗಾಯಿ ಒಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಾಲೆಗಳಿಗೆ ನೀರು ಹರಿಸಿ
ಹೇಮಾವತಿ ಜಲಾಶಯದಿಂದ 6.55 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. ಇದಕ್ಕೆ 40.60 ಟಿಎಂಸಿ ನೀರು ಹಂಚಿಕೆ ಮಾಡಬೇಕು. ಇಲ್ಲಿಯವರೆಗೂ ನಾಲೆಗಳಿಗೆ ಒಟ್ಟು 43.67 ಟಿಎಂಸಿ ನೀರು ಕೊಡಬೇಕಿತ್ತು. ಈವರೆಗೆ 13.9009 ಟಿಎಂಸಿ ನೀರು ಬಿಟ್ಟಿದ್ದಾರೆ. ಯಾವುದಕ್ಕೆ ನೀರು ಬಿಟ್ಟಿದ್ದಾರೆ ಅಂತ ಕೃಷಿ, ನೀರಾವರಿ ಇಲಾಖೆಯವರು ಹೇಳುತ್ತಿಲ್ಲ. ಇನ್ನೂ 30 ಟಿಎಂಸಿ ನೀರು ಕೊರತೆಯಿದೆ. ಸದ್ಯ ಜಲಾಶಯದಲ್ಲಿ 20 ಟಿಎಂಸಿ ನೀರಿದೆ. ಬೆಳೆ ಉಳಿಸಲು ನೀರು ಬಿಡುತ್ತಿಲ. ಆದ್ದರಿಂದ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.