ಸಾಹಿತ್ಯದಿಂದ ಮನದಲ್ಲಿ ಸಕಾರಾತ್ಮಕ ವಿಚಾರ ಹೆಚ್ಚಳ

mysore
Published on

ಮೈಸೂರು: ಸಾಹಿತ್ಯಕ್ಕೆ ಅದರದೇ ಆದ ಘನತೆ, ಗಾಂಭೀರ್ಯತೆ, ವಿಚಾರಶೀಲತೆ ಇದ್ದು, ಅದರ ಚಿಂತನೆಯಿಂದ ಸಕಾರಾತ್ಮಕ ವಿಚಾರಗಳು ಹೆಚ್ಚುತ್ತವೆ ಎಂದು ಮೈಸೂರು ಆಕಾಶವಾಣಿಯ ನಿವೃತ್ತ ನಿಲಯದ ನಿರ್ದೇಶಕಿ ವಿಜಯ ಹರನ್ ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಮಹಿಳಾ ಪ್ರಕಾರ ಸಂಸ್ಥೆಯ ಸಹಯೋಗದಲ್ಲಿ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ

ಆಯೋಜಿಸಿದ್ದ ಜಿಲ್ಲಾಮಟ್ಟ ಮೊದಲ ಮಹಿಳಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ವೃತ್ತಿ ಪ್ರವೃತ್ತಿಗಳ ಜತೆಗೂಡಿ ಕೆಲಸ ಮಾಡುವುದೂ ಒಂದು ಕಲೆ, ಮಹಿಳೆಯರಿಗೆ ಆ ಕಲೆ ಕರಗತವಾಗಿರುತ್ತದೆ ಎಂದರು.

ಡಾ.ವಿ.ಸೌಭಾಗ್ಯ ಲಕ್ಷ್ಮೀ ಮಾತನಾಡಿ, ಸಣ್ಣಕಥೆಗಳನ್ನು ಬರೆಯುವುದೂ ಒಂದು ಕಲೆ. ಸಣ್ಣದೊಂದು ಘಟನೆಯನ್ನು ಸವಿಸ್ತಾರಗೊಳಿಸುತ್ತಾ ಓದುಗರಿಗೆ ಸಂದರ್ಭದ ಅರಿವು ಮೂಡಿಸುವುದು ಸವಾಲೇ ಸರಿ ಎಂದರು.

ಮಹಿಳೆ ಮತ್ತು ಹಾಸ್ಯ ಪ್ರವೃತ್ತಿ ಕುರಿತು ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯ ಮಾಧ್ಯಮ ಪ್ರಮುಖ್ ಹಾಗೂ ಲೇಖಕಿ ಗಾಯತ್ರಿ ಸುಂದರೇಶ್ ಅವರು, ಹಾಸ್ಯ ಲೇಖನದ ಮೊದಲ ಮಹಿಳಾ ಸಾಹಿತಿ ಟಿ.ಸುನಂದಮ್ಮ ಅವರ ಬರಹಗಳಲ್ಲಿ ನಗುವಿನ ಅರಮನೆಯೇ ನೆಲೆಸಿರುತ್ತಿತ್ತು. ಪ್ರೊ.ಭುವನೇಶ್ವರಿ ಹೆಗಡೆ, ನುಗ್ಗೇನಹಳ್ಳಿ ಪಂಕಜಾ ಅವರಂತ ಮಹಿಳೆಯರು ಹಾಸ್ಯ ಬರಹದ ಮುನ್ನುಡಿಗೆ ಅಡಿಪಾಯ ಹಾಕಿದವರು ಎಂದರು.

ಗಮಕ ಕಲಾವಿದೆ ಧರಿತ್ರಿ ಆನಂದರಾವ್ ಅವರು ಗಮಕ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಸಮಿತಿಯ 13ನೇ ಕೂಟ ಸರಸ್ವತಿಪುರಂ ಸಾಹಿತ್ಯಕೂಟ ಮತ್ತು ಪರಿಷದ್‌ನ ಡಿಜಿಟಲ್ ಮಾಹಿತಿ ಕಣಜವನ್ನು ಲೋಕಾರ್ಪಣೆಗೊಳಿಸಲಾಯಿತು.

ನಂತರ ಮಹಿಳೆಯರಿಂದ ಲಾವಣಿ, ಭಾವಗೀತೆ ಮತ್ತು ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಅಭಾಸಾಪದ ಶ್ರೀಗಂಧ ವಲಯದ ಪ್ರಮುಖ್ ಡಾ.ವಿ.ರಂಗನಾಥ್, ಜಿಲ್ಲಾ ಸಮಿತಿಯ ಅಧ್ಯಕ್ಷ ಶೇಷಾದ್ರಿ ಸುಬ್ರಹ್ಮಣ್ಯ ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net