

ಕಡೂರು: ಪುಸ್ತಕಗಳ ಒಡನಾಟ ನಮ್ಮ ಜೀವನ ಬದಲಾಯಿಸಬಲ್ಲದು ಎಂದು ಪ್ರಾಧ್ಯಾಪಕಿ ಪುಷ್ಪಾ ಭಾರತಿ ತಿಳಿಸಿದರು.
ಜ್ಞಾನಭಾರತಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಪುಸ್ತಕಗಳ ಒಡನಾಟ ಕುರಿತು ಮಾತನಾಡಿ, ಓದು ಎಂಬುದು ಜ್ಞಾನದ ಮಾಧ್ಯಮ. ಪುಸ್ತಕಗಳನ್ನು ಓದುವುದರಿಂದ ನಮ್ಮ ಚಿಂತನೆಗಳನ್ನು ವಿಮರ್ಶೆಗೊಳಪಡಿಸಬಹುದು. ಜ್ಞಾನದ ಮಟ್ಟ ಹೆಚ್ಚಲು ಪುಸ್ತಕಗಳ ಓದು ಬಹು ದೊಡ್ಡ ಮಾಧ್ಯಮ. ಪತ್ರಿಕೆಗಳನ್ನು ಓದುವುದರಿಂದ ಪ್ರಚಲಿತ ವಿದ್ಯಮಾನ ತಿಳಿಯುತ್ತದೆ. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜೀವನಾನುಭವ ಆಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಕನ್ನಡದ ಕಾದಂಬರಿಗಳು, ಜನಪದ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ, ಹಾಸ್ಯ, ನಾಟಕಗಳು ಜ್ಞಾನ ಭಂಡಾರಕ್ಕೆ ಅಕ್ಷಯಪಾತ್ರೆಯಿದ್ದಂತೆ ಎಂದರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಅಜ್ಜಂಪುರ ಎಸ್.ಶ್ರುತಿ ಮಾತನಾಡಿ, ಜ್ಞಾನ ವಿಸ್ತರಣೆಗೆ, ನಮ್ಮ ಮನಸ್ಸನ್ನು ಚಿಂತನೆಗೆ ತೊಡಗಿಸುವ ಹಾಗೂ ಹಿಡಿತದಲ್ಲಿಡಲು ಪುಸ್ತಕಪ್ರೀತಿ ಬಹು ದೊಡ್ಡದು. ಪುಸ್ತಕಗಳ ಒಡನಾಟದಲ್ಲಿ ಜೀವನಾನುಭವದ ಹುಡುಕಾಟ ನಮಗೆ ನೀಡುವ ಅನುಭವ ಅನನ್ಯವಾದುದು. ಹೊಸ ತಲೆಮಾರಿನ ಬರಹಗಾರ್ತಿಯರು ಉದಯಿಸಬೇಕೆಂಬ ಆಶಯ ಸಂಘದ್ದಾಗಿದೆ ಎಂದರು.
ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಮಾತನಾಡಿ, ಪುಸ್ತಕಗಳನ್ನು ಓದುವವರ ಚಿಂತನೆ ವಿಶೇಷವಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಗಳು ಶ್ಲಾಘನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶಾ ರಾಜು, ತರೀಕೆರೆ ಘಟಕದ ಅಧ್ಯಕ್ಷೆ ಡಾ.ನಾಗಜ್ಯೋತಿ, ಪ್ರಿಯಾಂಕಾ, ಡಾ. ಸೋಮಶೇಖರ್, ಡಾ. ಶಾಯಿದಾ ಇದ್ದರು.