ಸಾಹಿತ್ಯದ ಗಟ್ಟಿ ಬೇರುಗಳಿರುವುದು ಗ್ರಾಮೀಣ ಭಾಗದಲ್ಲಿ

KDR kasapa
ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದ ಪ್ರಥಮ ಗ್ರಾಮ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಅನಂತು ಅವರ ಸಾಗದ ದಾರಿ ಕೃತಿ ಬಿಡುಗಡೆಗೊಳಿಸಲಾಯಿತು. ಭಂಡಾರಿ ಶ್ರೀನಿವಾಸ್, ಸೂರಿ ಶ್ರೀನಿವಾಸ್, ಚಿಕ್ಕನಲ್ಲೂರು ಪರಮೇಶ್, ಲತಾ ರಾಜಶೇಖರ್, ಚೌಡಮ್ಮ ಶಿವಲಿಂಗಸ್ವಾಮಿ ಇತರರಿದ್ದರು.
Published on

ಕಡೂರು: ಸಾಹಿತ್ಯದ ಗಟ್ಟಿ ಬೇರುಗಳಿರುವುದು ಗ್ರಾಮೀಣ ಭಾಗದಲ್ಲಿ. ಜೀವನಾನುಭವವನ್ನು ಸರಳವಾಗಿ ತಿಳಿಸುವ ಪೂರ್ವಿಕರ ಸಾಹಿತ್ಯ ಗ್ರಾಮೀಣ ಭಾಗದಲ್ಲಿ ಸುಪ್ತವಾಗಿದೆ. ಅಂಥ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಚಿಕ್ಕಬಾಸೂರು ಗ್ರಾಮದಲ್ಲಿ ಭಾನುವಾರ ಪ್ರಥಮ ಗ್ರಾಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ಅಳಿವಿಲ್ಲ. ಅದನ್ನು ಉಳಿಸುವ ಕಾರ್ಯ ಮಾಡಬೇಕಿಲ್ಲ. ಬದಲಾಗಿ ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕು. ಆಗ ಭಾಷೆ ತಾನಾಗಿಯೇ ಉಳಿಯುತ್ತದೆ. ಈ ಸಮ್ಮೇಳನದಲ್ಲಿ ಶಿಕ್ಷಣ ಗೋಷ್ಠಿ ಆಯೋಜನೆಯಾಗಿದೆ. ಪ್ರಸ್ತುತ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಿಯೂ ಈ ಸಮ್ಮೇಳನ ಬಳಕೆಯಾಗಬೇಕಿದೆ ಎಂದು ಆಶಿಸಿದರು.

ಶಿಕ್ಷಣದಿಂದ ಎಲ್ಲರಿಗೂ ನೌಕರಿ ಸಿಗುವುದಿಲ್ಲ. ಆದರೆ ಜ್ಞಾನ ಪಡೆದು ಪ್ರಜ್ಞಾವಂತ ಸಮಾಜ ನಿರ್ಮಿಸಬಹುದಾಗಿದೆ. ಗ್ರಾಮಗಳಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸಲು ಶಿಕ್ಷಣವಂತರಾಗಬೇಕಿದೆ. ಇದಕ್ಕೆ ಪಾಲಕರು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಮದ ಒಗ್ಗಟ್ಟಿನ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಪೂರಕ ವೇದಿಕೆ ನಿರ್ಮಿಸಿ ಉದಯೋನ್ಮುಖ ಲೇಖಕರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಸಾಗದ ದಾರಿ ಕೃತಿ ಬಿಡುಗಡೆಗೊಳಿಸಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿವು ಕನ್ನಡಿಗರನ್ನು ಅವಲಂಬಿಸಿದೆ. ಭಾಷೆ ಬಳಸಿದಷ್ಟೂ ಅದರ ಉಳಿವು ಹೆಚ್ಚಾಗುತ್ತದೆ. ನಮ್ಮ ಭಾಷೆ ಮೇಲಿನ ಅಭಿಮಾನ ಅನ್ಯಭಾಷೆಗಳಿಗೆ ಎಚ್ಚರಿಕೆಯಾಗಬೇಕು. ಕನ್ನಡದ ಬಗ್ಗೆ ದುರಭಿಮಾನ ಬೇಡ. ಬದಲಾಗಿ ಹೃದಯಪೂರ್ವಕ ಅಭಿಮಾನ ಇರಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿಯೂ ಕನ್ನಡಾಭಿಮಾನದ ಕಂಪು ಹರಡುವ ಕಾರ್ಯವನ್ನು ಪರಿಷತ್ತು ಸದಾ ಮಾಡುತ್ತಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಮಾತನಾಡಿ, ಕನ್ನಡ ನಾಡು, ನುಡಿ ಪ್ರಸಾರದ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗಗಳಲ್ಲೂ ಕನ್ನಡದ ಕಂಪನ್ನು ಹರಡಲು ನಿರಂತರ ಚಟುವಟಿಕೆ ನಡೆಸುತ್ತಿದೆ. ಗ್ರಾಮ ಸಾಹಿತ್ಯ ಸಮ್ಮೇಳನ ಗ್ರಾಮೀಣ ಭಾಗದ ಸಾಹಿತ್ಯ ಉದ್ದೀಪಿಸುವ ಮಹತ್ವದ ಹೆಜ್ಜೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಇರುವ ಸಮೃದ್ಧ ಸಾಹಿತ್ಯಿಕ ವಿಚಾರಗಳು ಎಲ್ಲರಿಗೂ ತಿಳಿಯಬೇಕು. ಆಗ ಕನ್ನಡ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮ ಸಮ್ಮೇಳನ ಅಪೂರ್ವ ಕಲ್ಪನೆಯಾಗಿದೆ. ಆಧುನಿಕ ಆವಿಷ್ಕಾರಗಳ ನಡುವೆ ನಮ್ಮ ಜೀವನದ ಧ್ಯೇಯ ಅರಿತುಕೊಳ್ಳಲು ಸಾಹಿತ್ಯ ಪ್ರಬಲ ಮಾಧ್ಯಮವಾಗಿದೆ. ಹಿರಿಯರ ಅನುಭವಗಳನ್ನು ಅರ್ಥೈಸಿಕೊಂಡು, ಬರಲಿರುವ ದಿನಗಳನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಸಾಹಿತ್ಯ ಮತ್ತು ಭಾಷಾ ಪ್ರೇಮ ಎಲ್ಲರಿಗೂ ಅತ್ಯಂತ ಅನಿವಾರ್ಯ ಅಗತ್ಯವಾಗಿದೆ. ಚಿಕ್ಕಬಾಸೂರು ಗ್ರಾಮ ಜಾನಪದ ಕಲೆಗಳಿಗೆ ಹೆಚ್ಚು ಒತ್ತುಕೊಡುವ ಗ್ರಾಮವಾಗಿರುವುದು ಹೆಮ್ಮೆಯ ಸಂಗತಿ ಎಂದು ಗ್ರಾಮ ಸಮ್ಮೇಳನಾಧ್ಯಕ್ಷ ಚಿಕ್ಕಬಾಸೂರು ಅನಂತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಗ್ರಾಮದಲ್ಲಿ ಅಲಂಕೃತಗೊಂಡ ಎತ್ತಿನಗಾಡಿಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಯಿತು. ಹಿರೇನಲ್ಲೂರು ಹೋಬಳಿ ಪರಷತ್ತಿನ ಅಧ್ಯಕ್ಷ ಶಿವಲಿಂಗಸ್ವಾಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಚೌಡಮ್ಮ, ಎಸ್.ಬಿ.ಹನುಮಂತಪ್ಪ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಸತೀಶ್, ಜೈ ಭುವನೇಶ್ವರಿ ಆಟೋ ಸಂಘದ ಅಧ್ಯಕ್ಷ ಪರಮೇಶಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಬಿ.ಶ್ರೀನಿವಾಸ್, ಗಿರೀಶ್, ಗುಡಿಗೌಡರಾದ ಚಂದ್ರಶೇಖರಯ್ಯ, ಸೋಮಸುಂದರ್, ಪರಮೇಶ್ವರಪ್ಪ, ಈಶ್ವರಪ್ಪ ವಿವಿಧ ಸಮಿತಿಗಳ ಸದಸ್ಯರು, ಗ್ರಾಮಸ್ಥರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net