

*ಹಿರಿಯ ಸಾಹಿತಿ ಮಂಜುನಾಥ್ ಪ್ರಸನ್ನ ಅಭಿಪ್ರಾಯ
*ವಿಶೇಷ ಉಪನ್ಯಾಸ ಕಾರ್ಯಕ್ರಮ
ಚಾಮರಾಜನಗರ: ಇತಿಹಾಸವಿಲ್ಲದೇ ಸಾಹಿತ್ಯವಿಲ್ಲ, ಆಗೆಯೇ ಸಾಹಿತ್ಯವಿಲ್ಲದೇ ಇತಾಹಾಸವೂ ಇಲ್ಲ. ಆದರೇ ಸಾಹಿತ್ಯದ ಕುರುಹುಗಳ ಮೂಲಕವೇ ನಾವು ಇತಿಹಾಸವನ್ನು ಹುಡುಕಿಕೊಂಡು ಹೋಗುತ್ತೇವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮತ್ತು ಹಿರಿಯ ಸಾಹಿತಿ ಮಂಜುನಾಥ್ ಪ್ರಸನ್ನ ಹೇಳಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಕವಿತೆ ವಾಚನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ನೆಲದಲ್ಲಿ ದೊರೆಯುವ ಶಿಲಾ ಶಾಸನಗಳು, ತಾಳೆ-ಓಲೆ ಗರಿಗಳು, ವಿವಿಧ ದಾಖಲೆಗಳು ಹಾಗೂ ಸಾಹಿತ್ಯದ ಮೂಲಕ ನಾವು ಸುಲಭವಾಗಿ ಇತಿಹಾಸವನ್ನು ಅರಿತುಕೊಳ್ಳಬಹುದಾಗಿದೆ. ತಲೆ ತಲೆಮಾರುಗಳಿಗೆ ಇತಿಹಾಸವನ್ನು ಕೊಂಡೊಯ್ಯುವ ಜವಾಬ್ದಾರಿ ಸಾಹಿತ್ಯಕ್ಕೆ ಇದೆ. ಸಾಹಿತ್ಯ ಮತ್ತು ಇತಿಹಾಸದ ಬೇರುಗಳನ್ನು ನಾವು ಹುಡುಕುತ್ತಾ ಹೋದರೆ ನಮಗೆ ಮೊದಲು ಶಿಲಾ ಶಾಸನಗಳು ದೊರೆಯುತ್ತದೆ. ಒಂದು ಇತಿಹಾಸ ನಮಗೆ ಸ್ಪಷ್ಟವಾಗಿ ದೊರೆಯಬೇಕಾದರೇ, ಆ ಕಾಲಘಟ್ಟದ ಸಾಹಿತ್ಯವೂ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯದ ಕುರುಹುಗಳನ್ನು ಹರಸಿಯೇ ನಾವು ಇತಿಹಾಸವನ್ನು ಹುಡುಕಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಹಿಂದಿನ ಇತಿಹಾಸವನ್ನು ನಾವು ಗಮನಿಸಿದರೇ ಸಂಸ್ಕೃತಿ ಮತ್ತು ಪ್ರಭುತ್ವವನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಆಡಳಿತ ವ್ಯವಸ್ಥೆ ಇತ್ತು. ಆದರೇ ಇಂದಿನ ದಿನಮಾನಗಳಲ್ಲಿ ತೋರಿಕೆಯ ರಾಜಕಾರಣಕ್ಕಾಗಿ ಸಂಸ್ಕೃತಿಯನ್ನು ವಿಭಜಿಸುವ ಕೆಲಸಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಾಹಿತ್ಯ ಮತ್ತು ಸಾಂಸ್ಕೃತಿಕತೆಗೆ ಮನ್ನಣೆ ದೊರಕದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು ವಿಚಾರದ ಕುರಿತು ಉಪನ್ಯಾಸಕ ಡಾ.ಮಂಜುನಾಥ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು, ರೋಟರಿ ಸಂಸ್ಥೆಯ ಅಧ್ಯಕ್ಷ ನಾಗರಾಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಜಯಣ್ಣ ಹಾಜರಿದ್ದರು.