ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ

01Rajesh7
Published on

ಕೊಳ್ಳೇಗಾಲ: ಕನ್ನಡ ಕಥಾ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಪ್ರೊ. ವಿಜಯಕುಮಾರ್ ಕರಿಕಲ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಅನಿಕೇತನ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಲೀಪ್ ಎನ್ಕೆ ಅವರ ತಿತ್ತಿ ಬ್ವಾಸನ ಟೈಟಾನ್ ವಾಚ್ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು. ಪಂಚ ಮಂಗೇಶರಾಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು, ಬಸವರಾಜ ಕಟ್ಟಿಮನಿ, ದೇವನೂರು ಮಹದೇವ, ಲಂಕೇಶ್, ಮೊಗಳ್ಳಿ ಗಣೇಶ್, ಕೃಷ್ಣಮೂರ್ತಿ ಹನೂರು ಮುಂತಾದ ಕಥೆಗಾರರು ಅಪಾರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು.

ವರ್ತಮಾನದ ಹೊಸ ತಲೆಮಾರಿನ ಕಥೆಗಾರರು ಇಂತಹ ಕಥೆಗಾರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಕಥೆಗಾರರು ಹೆಚ್ಚಿನ ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಹಿರಿಯ ಕಥೆಗಾರರು ಹಾಕಿಕೊಟ್ಟ ದಾರಿಯಲ್ಲಿ ದಿಲೀಪ್ ಎನ್ಕೆ ಅವರು ಸಾಗುತ್ತಿದ್ದು, ಅವರ ಕಥೆಗಳಲ್ಲಿ ಪ್ರಾದೇಶಿಕ ಅಸ್ಮಿತೆಯ ಕುರುಹುಗಳನ್ನ ನೋಡಬಹುದಾಗಿದೆ. ಹೊಸ ತಲೆಮಾರಿನ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ ಕಥೆಗಾರರಾಗಿ ದಿಲೀಪ್ ಮುಖ್ಯರಾಗುತ್ತಾರೆ ಎಂದರು.

ಯುವ ಬರಹಗಾರ ಬಸವಣ್ಣ ಮೂಕಹಳ್ಳಿ ಮಾತನಾಡಿ, ಆಧುನಿಕತೆ ಹಾಗೂ ತಂತ್ರಜ್ಞಾನ ಅದರಲ್ಲೂ ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿರುವ ಯುವಜನತೆ ಓದುವ ಹವ್ಯಾಸವನ್ನು ದೂರವಾಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ತಲೆಮಾರಿನ ಕತೆಗಾರರು ಯುವಜನತೆಯನ್ನು ಮುಖ್ಯವಾಗಿಸಿಕೊಂಡು ತಮ್ಮದೇ ಆದ ಸಂಯೋಜನೆಯನ್ನ ಕಾಪಾಡಿಕೊಂಡು ಅದನ್ನು ವರ್ತಮಾನದ ವಿಷಯಗಳ ನಡುವೆ ಸಂಯೋಜಿಸಿ ಕಥೆಗಳನ್ನ ರಚಿಸಬೇಕಾಗುತ್ತದೆ ಎಂದರು.

ವಸ್ತುವಿನ ಆಯ್ಕೆ, ಭಾಷೆಯ ಬಳಕೆ, ಕಥನ ವಿನ್ಯಾಸ ಇದರ ಜತೆಗೆ ಸಂರಚನೆಯ ರೂಪಕಗಳನ್ನು ಸೂಕ್ತವಾದ ರೀತಿಯಲ್ಲಿ ಹಾಗೂ ಬಹಳ ಸೂಕ್ಷ್ಮವಾಗಿ ಗಮನಿಸಿ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ತಮ್ಮ ಹಿರಿಯ ಕಥೆಗಾರರನ್ನ ಅಧ್ಯಯನ ಮಾಡುವುದರ ಜೊತೆಗೆ ಭೂತ ವರ್ತಮಾನ ಭವಿಷ್ಯಗಳನ್ನ ಕಥೆಗಳು ಕೇಂದ್ರೀಕರಿಸಿ ಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಹಿರಿಯ ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ಹೊಸ ತಲೆಮಾರಿನ ಕಥೆಗಾರರು ತಮ್ಮ ಹಿಂದಿನ ಕಥೆಗಾರರ ಕಥೆಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಅಲ್ಲಿನ ತಂತ್ರಗಳನ್ನು ಹಾಗೂ ವಿನ್ಯಾಸ ಕ್ರಮಗಳನ್ನು ರೂಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಜಿಲ್ಲೆಯ ಮಲೆ ಮಹದೇಶ್ವರ ಮಂಟೇಸ್ವಾಮಿ ಕಾವ್ಯಗಳ ಕಥನ ರೂಪಕಗಳನ್ನು ಅಧ್ಯಯನ ಮಾಡಿದರೆ ಅವರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕಂತಾಗುತ್ತದೆ. ನೆಲದ ಪರಂಪರೆಯನ್ನು ತಮ್ಮ ಕಥೆಗಳಲ್ಲಿ ಜೀವಂತವಾಗಿರಿಸಿಕೊಳ್ಳುವ ಕಾರ್ಯ ಇತ್ತೀಚಿನ ಕಥೆಗಾರರಲ್ಲಿ ಆಗಬೇಕಿದೆ ದಿಲೀಪ್ ಅವರ ಕೆಲವು ಕಥೆಗಳಲ್ಲಿ ಇಂತಹ ಪ್ರಯೋಗಗಳನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಯುವ ಬರಹಗಾರ ದಾದಾಪೀರ್ ಜೈಮನ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಲೆಗ್ಸಾಂಡರ್, ಕಥೆಗಾರ ದಿಲೀಪ್ ಎನ್ಕೆ, ಚಾಮರಾಜನಗರ ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಕುಮಾರ ಸರಗೂರು, ಪುಸ್ತಕ ಮಳಿಗೆ ಗೋವಿಂದರಾಜು, ಸಿ.ಎಂ ನರಸಿಂಹಮೂರ್ತಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net