ಸಾಹಿತ್ಯಕ್ಕಿದೆ ಸಮಾಜ ಬದಲಿಸುವ ಶಕ್ತಿ

kavigoshti
Published on

ಬೀದರ್: ಸಾಹಿತ್ಯಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಕವನಗಳು ಮನಮುಟ್ಟುವ ಜತೆಗೆ ಸಮಾಜವನ್ನು ಎಚ್ಚರಿಸುವಂತಿರಬೇಕು ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಹೇಳಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತಿಗೆ ಸೀಮಿತ ಎಂಬುದಿಲ್ಲ. ಎಲ್ಲ ಕ್ಷೇತ್ರಗಳನ್ನು ಒಳಗೊಂಡು ಕವನ ರಚಿಸುವ ಮೂಲಕ ಜಾಗೃತಿ ಮೂಡಿಸುವ ಹೊಣೆಗಾರಿಕೆ ಇದೆ ಎಂದರು.
ಬೀದರ್ ಕನ್ನಡ ವೈಶಿಷ್ಟ್ಯದಿಂದ ಕೂಡಿದೆ. ಗಡಿಗೆ ಹೊಂದಿಕೊಂಡಿರುವ ನೆರೆ ರಾಜ್ಯಗಳ ಮರಾಠಿ, ತೆಲುಗು ಭಾಷೆಗಳ ಪ್ರಭಾವದ ಮಧ್ಯೆ ಮಾತೃ ಭಾಷೆ ಗಟ್ಟಿಯಾಗಿ ಉಳಿದಿದೆ. ಇಂದಿನ ಯುವ ಸಮೂಹ ಸಾಹಿತ್ಯ, ಸಂಗೀತದ ಕಡೆಗೆ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಸಾಹಿತಿ ರಜಿಯಾ ಬಳಬಟ್ಟಿ ಮಾತನಾಡಿ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಕಾವ್ಯ ಹೆಚ್ಚು ದಿನ ಉಳಿಯುತ್ತದೆ. ಜನಪರ ಮತ್ತು ಜೀವಪರ ಕಾಳಜಿಯ ಕವನ ರಚಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಲೆಮರೆ ಕಾಯಂತಿರುವ ಯುವ ಸಾಹಿತಿಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯ ಮೂರ್ತಿ, ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಮಾತನಾಡಿದರು.
ಸಾಹಿತಿ ಎಸ್.ಎಂ. ಜನವಾಡಕರ್, ಮಹ್ಮದ್ ಪಟೇಲ್, ಡಾ.ಬಸವರಾಜ, ವೈಜಿನಾಥ ಬಾಬಶೆಟ್ಟಿ ಇತರರಿದ್ದರು. ಲಕ್ಷ್ಮಣ ಮೇತ್ರೆ ಸ್ವಾಗತಿಸಿದರು. ಸುನೀತಾ ಬೀಕ್ಲೆ ನಿರೂಪಣೆ ಮಾಡಿದರು. ಭೀಮಶಾ ಬಸಲಾಪುರ ವಂದಿಸಿದರು.
ಕವಿಗೋಷ್ಠಿಯಲ್ಲಿ ರಮೇಶ ಬಿರಾದಾರ್, ಸುವರ್ಣಮಾಲಾ, ಸರಿತಾ ಬೇಬಿ, ಮಾಣಿಕ ನೇಳಗೆ, ಡಾ.ರೇಣುಕಾ ಸ್ವಾಮಿ, ಪ್ರಿಯಾ ಲಂಜವಾಡಕರ್, ಗೀತಾಂಜಲಿ ಪಾಟೀಲ್, ಧನಲಕ್ಷ್ಮೀ ಪಾಟೀಲ್, ಸುಪ್ರೀತಾ ಶೀಲವಂತ, ಲಕ್ಷ್ಮೀ ಮೇತ್ರೆ, ಜಯಶ್ರೀ ಕೂಡಂಬಲ್, ಡಾ.ಸುರೇಖಾ ಬಿರಾದಾರ್, ಓಂಕಾರ ಉಪ್ಪೆ, ಮಲ್ಲಮ್ಮ ಚಿಂಚೋಳಿ, ಡಾ.ಗೌತಮ ಬಕಪ್ಪ, ಶರಣರಡ್ಡಿ ಕೋಡ್ಲಾ, ಪ್ರಭಾ ಮ್ಯಾಗೇರಿ, ಚನ್ನಮ್ಮ ಡೋಣಗಾಪುರೆ, ಶ್ರೀದೇವಿ ಪಾಟೀಲ್, ಸಂಗೀತಾ ಮುತ್ತಂಗಿ, ಸಂತೋಷ ಸುಂಕದ, ರಾಘವೇಣಿ ಹಳೆಂಬರ ಇತರರು ಸ್ವರಚಿತ ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net