ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ 28ಕ್ಕೆ

Prathapjogi
Published on

ಚಿತ್ರದುರ್ಗ: ಮೈಸೂರಿನ ಪುರಭವನದಲ್ಲಿ ಜ. 28ರಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಿಂದ ಸಮುದಾಯದ ರಾಜ್ಯಮಟ್ಟದ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9ಕ್ಕೆ ಶಾಸಕ ಜಿ.ಟಿ.ದೇವೆಗೌಡ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಾವಂತರಿಗೆ ಪುರಸ್ಕರಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಎಂಎಲ್ಸಿಗಳಾದ ಟಿ.ಎ.ಶರವಣ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಡಾ.ಬಸವ ರಮಾನಂದ ಸ್ವಾಮೀಜಿ, ಶ್ರೀ ಯೋಗಿ ನಿವೃತ್ತನಾಥ್, ಶ್ರೀ ಕರುಣಾಕರ ಸ್ವಾಮೀಜಿ, ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ ಸಂತ ಸಂದೇಶ ನೀಡಲಿದ್ದಾರೆ. ಇದೇ ವೇಳೆ ಶ್ರೀ ಬಸವನಾಗಿದೇವ ಸ್ವಾಮೀಜಿ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಸಂಜೆ 5ಕ್ಕೆ ನಡೆಯುವ ಸಮಾರೋಪದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ವಿಪಕ್ಷ ನಾಯಕರಾದ ಆರ್.ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದ ಪ್ರತಾಪ್ ಸಿಂಹ, ಒಕ್ಕೂಟದ ಅಧ್ಯಕ್ಷ ಎಂ.ಪ್ರಕಾಶ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಒಕ್ಕೂಟದ 46 ಸಮುದಾಯದವರು ಪಾಲ್ಗೊಳ್ಳಲಿದ್ದು, ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ಸರ್ಕಾರಿ ಭೂಮಿಯಲ್ಲಿ 10 ವರ್ಷ ಮೇಲ್ಪಟ್ಟು ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ಸಾಗಿಸುವವರ ಹೆಸರಿಗೆ ನಿವೇಶನ ಮಂಜೂರು ಮಾಡಬೇಕು. ಕುಲಕಸುಬನ್ನು ಮಾಡುವವರಿಗೆ ಅಗತ್ಯ ಸೌಲಭ್ಯ ನೀಡುವ ಮೂಲಕ ಸ್ಪಂದಿಸಬೇಕು ಎಂಬುದು ಒಕ್ಕೂಟದ ಹಕ್ಕೋತ್ತಾಯಗಳಾಗಿವೆ ಎಂದು ಹೇಳಿದರು.

ಒಕ್ಕೂಟದ ಚಿತ್ರದುರ್ಗ ಗೌರವಾಧ್ಯಕ್ಷ ರಾಮು ಗೋಸಾಯಿ, ಉಪಾಧ್ಯಕ್ಷೆ ಜ್ಯೋತಿ ದಾಸರ್, ಕಾರ್ಯದರ್ಶಿ ಇಂದಿರಾ ದಾಸರ್, ಚಿಕ್ಕಣ್ಣ ಯಾದವ್, ಮಧು ಜೋಗಿ, ಚಂದು ಯಾದವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net