

ಕುಶಾಲನಗರ: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜನವರಿ ತಿಂಗಳಲ್ಲಿ ಆಯೋಜಿಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದರು.
ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಶ್ರಮ ಇಲ್ಲಿ ಮುಖ್ಯ. ತಾಲೂಕಿನ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸಮ್ಮೇಳನ ಊರಿನ ಉತ್ಸವವಾಗಬೇಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕೋರಿದರು.
ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಯುವಜನರನ್ನು ಸಾಹಿತ್ಯದೆಡೆಗೆ ಆಕರ್ಷಿಸುವ ಹಬ್ಬವಾಗಬೇಕಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಗೌರವಿಸುವ ವೇದಿಕೆ ಇದಾಗಿದೆ. ಆ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಬ್ಬರು ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಬೇಕು ಎಂದರು.
ಕಸಾಪ ವಿಶೇಷ ಆಹ್ವಾನಿತ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ತಾಲೂಕು ಘೋಷಣೆಯಾದಾಗ ಮನತುಂಬಿ ಬಂದಿತ್ತು. ಇದೀಗ ಈ ಹೊಸ ತಾಲೂಕಿನಲ್ಲಿ ಜರುಗುತ್ತಿರುವ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಅತ್ಯಂತ ಯಶಸ್ವಿಯಾಗಿ ಸಂಘಟಿಸಬೇಕಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಪುರಸಭೆ ಅಧ್ಯಕ್ಷ ಜಯವರ್ಧನ, ಉಪಾಧ್ಯಕ್ಷೆ ಸುರಯ್ಯ ಭಾನು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹೇಶ್, ಉಪಾಧ್ಯಕ್ಷ ಎಂ.ಟಿ.ಬೇಬಿ, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಎಂ.ಇ.ಮೊಹಿದ್ದೀನ್, ಫ್ಯಾನ್ಸಿ ಮುತ್ತಣ್ಣ, ಟಿ.ಜಿ.ಪ್ರೇಮಕುಮಾರ್, ಕುಶಾಲನಗರ ಪುರಸಭೆ ಸದಸ್ಯೆ ರೂಪಾ ಉಮಾಶಂಕರ್, ವಿ.ಎಸ್.ಆನಂದಕುಮಾರ್, ಎಂ.ವಿ.ನಾರಾಯಣ, ಕೆ.ಜಿ.ಮನು, ನಿವೃತ್ತ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ, ಸಬಲಂ ಭೋಜಣ್ಣ ರೆಡ್ಡಿ, ಉಪನ್ಯಾಸಕ ಫಿಲಿಪ್ ವಾಸ್, ಉ.ರಾ.ನಾಗೇಶ್, ಹೇಮಲತಾ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ವೆಂಕಟೇಶ್ ಪೂಜಾರಿ, ಎಂ.ಕೃಷ್ಣ, ರಾಮದಾಸ್, ಮೊಣ್ಣಪ್ಪ, ನಾಗೇಗೌಡ, ಲೇಖನಾ, ಚಂದ್ರು, ಡಿ.ವಿ.ರಾಜೇಶ್, ಉಮಾಶಂಕರ್, ಕೆ.ಬಿ.ರಾಜು, ಎಸ್.ಎನ್.ರಾಜೇಂದ್ರ, ಜಗದೀಶ್, ಎಂ.ಎನ್.ಚಂದ್ರಮೋಹನ್ ಇತರರಿದ್ದರು.
ಸಮ್ಮೇಳನದ ರೂಪು ರೇಷೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಸ್ವಾಗತ, ಹಣಕಾಸು ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು. ಸಮ್ಮೇಳನದ ದಿನ ಆತಿಥ್ಯಕ್ಕೆ ಸಾಹಿತ್ಯ ಪರಿಷತ್ತಿಗೆ ಅಗತ್ಯವಿದ್ದಲ್ಲಿ ಹತ್ತು ಕೊಠಡಿಗಳನ್ನು ನೀಡುವುದಾಗಿ ಉದ್ಯಮಿ ರವೀಂದ್ರ ರೈ ಸಭೆಯಲ್ಲಿ ಘೋಷಿಸಿದರು.