

ಪಾಂಡವಪುರ : ಜಿಲ್ಲೆಯಲ್ಲಿ ಆಯೋಜನೆಗೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಮ್ಮೇಳನದ ಪ್ರಚಾರ ರಥವನ್ನು ತಾಲೂಕು ಆಡಳಿತ ಮತ್ತು ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಗುರುವಾರ ಬರಮಾಡಿಕೊಂಡು ಭಾಷಾಭಿಮಾನ ಮೆರೆದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ವಾದನದೊಂದಿಗೆ ರಥವನ್ನು ಸ್ವಾಗತಿಸಿದ್ದು ಗಮನ ಸೆಳೆಯಿತು. ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥ, ಸಮ್ಮೇಳನದ ಬಗ್ಗೆ ಜನರ ಗಮನ ಸೆಳೆಯಿತು. ಅರುಣೋದಯ ಕಲಾ ತಂಡದ ಕಲಾವಿದರು ಕನ್ನಡ ನಾಡು, ನುಡಿ, ನೆಲ ಜಲದ ಮೇಲಿನ ಅಭಿಮಾನ ಮೂಡಿಸುವ ಗೀತೆ ಮತ್ತು ನೃತ್ಯ ಪ್ರಸ್ತುತಿ ಮಾಡಿ ಗಮನ ಸೆಳೆದರು.
ಈ ಸಂದರ್ಭ ತಹಸೀಲ್ದಾರ್ ಎಸ್.ಸಂತೋಷ್, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ, ಹೇಮಗಿರಿ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಕೆಪಿಸಿಸಿ ಕಾರ್ಯದರ್ಶಿ ಎಚ್.ತ್ಯಾಗರಾಜು ಇತರರು ಇದ್ದರು.
ಮೂರು ದಿನ ಸಂಚಾರ : ಸಮ್ಮೇಳನದ ಪ್ರಚಾರ ರಥ ಮೂರು ದಿನಗಳ ಕಾಲ ತಾಲೂಕಿನಾದ್ಯಂತ ಸಂಚರಿಸಲಿದೆ.
ಗುರುವಾರ ಚಿನಕುರಳಿ, ಕೆ.ಬೆಟ್ಟಹಳ್ಳಿ, ಎಲೆಕೆರೆ ಮಾರ್ಗದ ಶಾಲಾ ಕಾಲೇಜುಗಳನ್ನು ಕ್ರಮಿಸಿದೆ. ನ.22 ರಂದು ಡಿಂಕಾ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಹರವು ಈ ಭಾಗದಲ್ಲಿ ಜನ ಜಾಗೃತಿ ಮೂಡಿಸಲಿದೆ. 23 ರಂದು ಮೇಲುಕೋಟೆ, ಜಕ್ಕನಹಳ್ಳಿ, ಬೆಳಾಳ್ಳೆ, ಮಾಣಿಕ್ಯನಹಳ್ಳಿ, ಸುಂಕಾತೊಣ್ಣೂರುಗಳಲ್ಲಿ ರಥಕ್ಕೆ ಭವ್ಯ ಸ್ವಾಗತ ನೀಡಲು ಸಿದ್ಧತೆಗಳು ನಡೆದಿದೆ.