

ಕುಶಾಲನಗರ; ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ.3ರಂದು ಆಯೋಜನೆಗೊಂಡಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಉತ್ಸವವಾಗಿ ಆಚರಣೆಗೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಹೇಳಿದರು.
ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಶಾಲನಗರದ ರೈತ ಸಹಕಾರ ಭವನದಲ್ಲಿ ತಾಲೂಕು ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮೈಸೂರು ರಸ್ತೆಯ ಕಾವೇರಿ ನದಿ ದಂಡೆಯಿಂದ ಸಮ್ಮೇಳನದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಮ್ಮೇಳನದಲ್ಲಿ ಕುಶಾಲನಗರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾಲೂಕಿನ ಉತ್ಸವವಾಗಿಸಲು ಸಹಕಾರ ನೀಡಬೇಕೆಂದು ಪಂಚಾಯಿತಿಗಳ ಚುನಾಯಿತರು ಹಾಗು ಅಧಿಕಾರಿಗಳಲ್ಲಿ ಕೋರಿಕೊಂಡರು.
ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಕುಶಾಲನಗರ ಆಡಳಿತಾತ್ಮಕವಾಗಿ ಉದ್ಘಾಟನೆಯಾಗಿದೆ. ಆದರೆ ತಾಲೂಕು ಸಮ್ಮೇಳನದ ವೈಭವದ ಮೆರವಣಿಗೆಯೊಂದಿಗೆ ಸಾಂಸ್ಕೃತಿಕವಾಗಿಯೂ ಉದ್ಘಾಟಿಸಲು ಇಡೀ ತಾಲೂಕಿನ ಮಹಾಜನತೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಜಿಲ್ಲಾ ಸಮಿತಿ ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಮೆ.ನಾ.ವೆಂಕಟನಾಯಕ್, ಮಂಜುನಾಥ, ಕೆ.ಎನ್. ದೇವರಾಜು, ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ತಾಲೂಕು ಕಾರ್ಯದರ್ಶಿ ಎಸ್. ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೊ.ಎಚ್. ಬಿ. ಲಿಂಗಮೂರ್ತಿ ಇತರರು ಇದ್ದರು.