

ತೀರ್ಥಹಳ್ಳಿ: ಸಾಹಿತ್ಯ ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಸಾರ್ವಕಾಲಿಕ ಸತ್ಯದೊಂದಿಗೆ ಸಮಾಜವನ್ನು ಎಚ್ಚರಿಸುವಂತಿರಬೇಕು. ರಂಗಭೂಮಿ ಮತ್ತು ಚಿತ್ರರಂಗಕ್ಕೂ ಇದು ಅನ್ವಯವಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ವೀಣಾ ಆರ್. ಕಾರಂತ ಬರೆದಿರುವ ‘ಕಪಟರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತ್ಯ ಮನರಂಜನೆಯ ವಸ್ತುವಾಗಿರದೆ ಮನೋವಿಕಾಸದ ಸಾಧನವಾಗಬೇಕು. ಕುವೆಂಪು, ಯು.ಆರ್.ಅನಂತಮೂರ್ತಿ ಮುಂತಾದ ಸಾಹಿತಿಗಳಿಂದಾಗಿ ಕನ್ನಡ ಸಾರಸ್ವತ ಲೋಕಕ್ಕೆ ತಾಲೂಕಿನ ಕೊಡುಗೆ ಗಮನಾರ್ಹವಾಗಿದೆ ಎಂದರು.
ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳೂ ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಿ ವಾಗ್ವಾದಕ್ಕೆ ತೆರೆದುಕೊಳ್ಳುವಂತಿರಬೇಕು. ಭಾಷೆಯ ಹೊಸ ಮಜಲಿನ ಮೂಲಕ ಓದುಗರನ್ನು ಸೆಳೆಯುವಂತಿರಬೇಕು. ನಾನು ಚಿತ್ರ ನಿರ್ದೇಶನದಲ್ಲಿ ಈ ಎಲ್ಲ ವಿಚಾರಗಳಿಗೆ ಆದ್ಯತೆ ನೀಡುತ್ತೇನೆ ಎಂದರು.
ಕೃತಿಯ ಕುರಿತು ಮಾತನಾಡಿದ ಪತ್ರಕರ್ತ ಚಂದ್ರಹಾಸ ಹಿರೇಮಳಲಿ, ಓದುವ ತಾಳ್ಮೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣದ ದುಷ್ಪರಿಣಾಮದ ಫಲವಾಗಿ ಪ್ರಸ್ತುತ ಓದುಗರ ಅಭಿರುಚಿಯೇ ಬದಲಾಗಿದೆ. ಸಾಹಿತ್ಯವನ್ನು ಓದುವ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಗುಣಮಟ್ಟದ ಬರಹಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಈ ಕೃತಿಯೂ ಸೇರಿದಂತೆ 17ಕೃತಿಯನ್ನು ರಚಿಸಿರುವ ವೀಣಾ ಕಾರಂತರ ಪ್ರಯತ್ನ ಪ್ರಶಂಸನೀಯ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಅನ್ನಪೂರ್ಣಾ ಪ್ರಕಾಶನದ ಸಿರಿಗೇರಿ ಯರ‌್ರಿಸ್ವಾಮಿ, ಲೇಖಕಿ ವೀಣಾ ಆರ್. ಕಾರಂತ, ಲೇಖಕ ಜಿ.ಕೆ.ಸತೀಶ್ ಇದ್ದರು.