

ಬೀದರ್: ಕೃತಿ ಮತ್ತು ಶೃತಿ ಸೇರಿದಾಗ ಸಂಸ್ಕೃತಿ ಹೊರಹೊಮ್ಮುತ್ತದೆ. ಸಾಹಿತ್ಯ ಮತ್ತು ಸಂಗೀತ ಒಂದು ನಾಣ್ಯದ ಎರಡು ಮುಖಗಳು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಬೀದರ್ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಅಂಧರ ಮತ್ತು ಅಂಗವಿಕಲರ ಬಾಳಿಗೆ ಸಂಗೀತ ಜೀವ ನೀಡಿದೆ. ಭಿಕ್ಷೆ ಬೇಡುವ ಅನೇಕರಿಗೆ ಸಂಗೀತ ಶಿಕ್ಷಣ ನೀಡಿ ಬಾಳಿಗೊಂದು ಬೆಳಕು ನೀಡಿರುವ ಏಕೈಕ ಸಂಸ್ಥೆ ಗದುಗಿನ ಪುಣ್ಯಾಶ್ರಮ. ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಸೇವೆಯು ಅವಿಸ್ಮರಣೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರ ಅನೇಕ ನಿಗಮ-ಮಂಡಳಿಗಳನ್ನು ಸ್ಥಾಪಿಸಿದೆ. ಅದೇ ರೀತಿ ಸಂಗೀತ ಮಂಡಳಿ ಸ್ಥಾಪಿಸಿ ಸಂಗೀತ ಕಲಿತ ಅಂಧರ ಮತ್ತು ಅಂಗವಿಕಲರನ್ನು ಉನ್ನತ ಸ್ಥಾನಕ್ಕೆ ನೇಮಿಸುವ ಸಂಬಂಧ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಬಸವಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಸಂಗೀತ ಮಾನಸಿಕ ನೆಮ್ಮದಿಗೆ ಮಹಾ ಔಷಧ. ಸಂಗೀತ ಹೊಂದಿರುವ ಮನೆ ನೆಮ್ಮದಿ ತಾಣ ಎಂದರು.
ಅಧ್ಯಕ್ಷತೆ ಪರಿಷತ್ ಜಿಲ್ಲಾಧ್ಯಕ್ಷ ಶಿವಸ್ವಾಮಿ ಚಿನಕೇರಿ ವಹಿಸಿದ್ದರು. ಸರ್ಕಾರಿ ಐಟಿಐ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ, ರಾಜ್ಯ ಸಂಗೀತ ಶಿವಾನುಭವ ವೇದಿಕೆ ಸಂಚಾಲಕ ನವಲಿಂಗ ಪಾಟೀಲ್ ಮಾತನಾಡಿದರು. ಲಿಂಗಾರತಿ ನಾವದಗೇರೆ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು. ದತ್ತಪ್ಪ ಕೀರ್ತಿಕರ್ ವಂದಿಸಿದರು. ಜಗನ್ನಾಥ ನಾನಕೇರಿ, ವಿಘ್ನೇಶ್ವರ ಹಿರೇಮಠ, ಸಂತೋಷ ಕಾಮಶೆಟ್ಟಿ, ಜನಾರ್ಧನ ವಾಘಮಾರೆ, ಶಿವಲಿಂಗ ಎರಗಲ್, ಚನ್ನಬಸಪ್ಪ ನೌಬಾದೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪರಿಷತ್ ಪದಾಧಿಕಾರಿ ನೇಮಕ
ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಿವಸ್ವಾಮಿ ಚಿನಕೇರಿ (ಅಧ್ಯಕ್ಷ), ಶಿವಕುಮಾರ ಸಾಲಿ (ಉಪಾಧ್ಯಕ್ಷ), ಸಂಗಯ್ಯ ಸ್ವಾಮಿ ಹಿರೇಮಠ (ಗೌರವ ಕಾರ್ಯದರ್ಶಿ), ಲಿಂಗಾರತಿ ನಾವದಗೇರಿ (ಸಹ ಕಾರ್ಯದರ್ಶಿ), ದತ್ತಪ್ಪ ಕೀತರ್ಿಕರ (ಕೋಶಾಧ್ಯಕ್ಷ), ಜನಾರ್ಧನ ವಾಘಮಾರೆ (ಸಂಘಟನಾ ಕಾರ್ಯದರ್ಶಿ), ಸಂಗಮೇಶ ಬಿರಾದಾರ (ಸಹ ಸಂಘಟನಾ ಕಾರ್ಯದರ್ಶಿ), ರಮೇಶ ಕೊಳಾರ್, ಬಸವರಾಜ ಬಿರಾದಾರ, ರೇಖಾ ನಿಂಗದಳ್ಳಿ, ಸೂಗಮ್ಮ ನಾವದಗೇರಿ, ಕಮಲಾಬಾಯಿ ವಿಶ್ವನಾಥ (ಕಾರ್ಯಕಾರಿಣಿ ಸದಸ್ಯರು) ಹಾಗೂ ಮಹೇಶ ಮಜಗೆ (ಬೀದರ್ ತಾಲೂಕು ಅಧ್ಯಕ್ಷ).
ಪಂಡಿತ ಪುಟ್ಟರಾಜ ಗವಾಯಿಗಳು ಜನ್ಮ ತಾಳದಿದ್ದರೆ ಅಂಧರ ಹಾಗೂ ಅಂಗವಿಕಲರ ಬಾಳು ಶಾಶ್ವತವಾಗಿ ಕತ್ತಲಾಗಿರುತಿತ್ತು. ಗದಗ ಪುಣ್ಯಾಶ್ರಮದಲ್ಲಿ ಯಾವುದೇ ಜಾತಿ, ಮತ, ಧರ್ಮ ಹಾಗೂ ಮೇಲು-ಕೀಳು ಎನ್ನದೆ ಸರ್ವರಿಗೂ ಸಂಗೀತ ಶಿಕ್ಷಣ ಕೊಟ್ಟು ರಾಷ್ಟ್ರೀಯ ಮಟ್ಟದವರೆಗೆ ಬೆಳೆಸಿದ ಖ್ಯಾತಿಯಿದೆ.| ಶ್ರೀ ಡಾ.ಶಿವಾನಂದ ಸ್ವಾಮೀಜಿಹುಲಸೂರು ಗುರುಬಸವೇಶ್ವರ ಸಂಸ್ಥಾನ