ಸಾಹಿತ್ಯ ರಚನೆಗೆ ಮಾನಸಿಕ ಸಿದ್ಧತೆ ಅಗತ್ಯ: ಹಿರಿಯ ವಿದ್ವಾಂಸ ಡಾ.ರಾಮೇಗೌಡ (ರಾಗೌ) ಅಭಿಮತ

2
Published on

ಮೈಸೂರು: ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕಾದರೆ ಸೌಹಾರ್ದತೆ, ಸ್ನೇಹ ಹಾಗೂ ಸಹಪಂಕ್ತಿ ಭೋಜನ ಮುಖ್ಯ ಎಂದು ಹಿರಿಯ ವಿದ್ವಾಂಸ ಡಾ.ರಾಮೇಗೌಡ (ರಾಗೌ) ಅಭಿಪ್ರಾಯಪಟ್ಟರು.

ಚಾವಡಿ ಗೆಳೆಯರ ಬಳಗದಿಂದ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಭಾನುವಾರ 1998-2000ನೇ ಸಾಲಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ಜನಮನ ಸಂಪಾದಕತ್ವದ ‘ಮೊಳಕೆ’ ಕಥಾ ಸಂಕಲನ ಹಾಗೂ ಮಹೇಶ್ ಅಗಸರಹಳ್ಳಿ ಸಂಪಾದಕತ್ವದ ‘ಗರಿಕೆ’ ಅಂಕಣ ಬರಹ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಎನ್ನುವುದು ಸುಮ್ಮನೆ ಬರುವುದಿಲ್ಲ. ಅದಕ್ಕೆ ಮಾನಸಿಕ ಸಿದ್ಧತೆ ಅಗತ್ಯ. ಸಾಹಿತ್ಯ ಎಲ್ಲಿ ಹೇಗೆ ಹುಟ್ಟುತ್ತದೆ ಎಂದು ಹೇಳಲು ಬರುವುದಿಲ್ಲ. ಆದರೆ ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕಾದರೆ ಅದಕ್ಕೊಂದು ಚರ್ಚೆ, ವೇದಿಕೆ ಅಗತ್ಯ. ಸೌಹಾರ್ದತೆ, ಸ್ನೇಹ ಹಾಗೂ ಸಹಪಂಕ್ತಿ ಭೋಜನ ಮುಖ್ಯ ಎಂದರು.

ಕವಿತೆಗಳನ್ನು ಓದುವಾಗ ವಾಸ್ತವತೆಯನ್ನು ಅರಿಯಬೇಕು. ಕುವೆಂಪು ಅವರು ದೋಣಿ ಸಾಗಲಿ... ಮುಂದೆ ಹೋಗಲಿ ಕವನವನ್ನು ಕುಕ್ಕರಹಳ್ಳಿ ಕೆರೆಯ ದಡದಲ್ಲಿ ಕುಳಿತು ಬರೆದಿದ್ದಾರೆ ಎಂದು ಭಾವಿಸಬಾರದು. ಯಾವುದೇ ಕವಿಯಾದರೂ ತನ್ನ ಮನಸ್ಸಿಗೆ ಹೊಳೆದಿದ್ದನ್ನು ಯಾವ ಕ್ಷಣದಲ್ಲಿ ಬೇಕಾದರೂ ಬರೆದಿರಬಹುದು. ಆತ್ಮಚರಿತ್ರೆ ಕೇವಲ ದೊಡ್ಡ ಕವಿ, ವ್ಯಕ್ತಿಗಳಿಗೆ ಮಾತ್ರ ಸೀಮಿತವಾದುದಲ್ಲ. ಕೂಲಿಯರು, ರೈತರು ಬೇಕಾದರೂ ಆತ್ಮಚರಿತ್ರೆ ಬರೆಯಬಹುದು. ಅವರಿಗೆ ಅವರದೇ ಅದ ಅನುಭವ ಇರುತ್ತದೆ ಎಂದರು.

ಇಂದಿನ ದಿನಮಾನದಲ್ಲಿ ಪ್ರಾಮಾಣಿಕತೆ ಕಡಿಮೆ ಅಗುತ್ತಿದೆ. ಎಲ್ಲವೂ ವೈಯಕ್ತಿಕ ಸ್ವಾರ್ಥ, ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಹಿಂದೆ ಇದ್ದ ಸಾಮಾಜಿಕ ಗೌರವ, ನೆಮ್ಮದಿ ಈಗ ಸುಕ್ಷಿತರ ಕಾಲದಲ್ಲಿಯೇ ಇಲ್ಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವಕರು ಬರೆಯುವುದು, ಸಾಹಿತ್ಯಾಭಿರುಚಿಯನ್ನು ಮರೆತು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಇಂತಹ ಸಂದರ್ಭದಲ್ಲಿ ಬರವಣಿಗೆಯಲ್ಲಿ ತೊಡಗಿರುವವರು ಪ್ರಾಮಾಣಿಕತೆಯಿಂದ ಬರೆಯಬೇಕು ಎಂದು ಸಲಹೆ ಮಾಡಿದರು.

ಮೈಸೂರು ವಿವಿಯ ಮೊದಲ ಕನ್ನಡ ಪ್ರಾಧ್ಯಾಪಕ ಹುದ್ದೆ ಯಾರಿಗೆ ಎನ್ನುವ ಚರ್ಚೆ ಆರಂಭವಾಯಿತು. ಟಿ.ಎಸ್.ವೆಂಕಣ್ಣಯ್ಯ ಅವರು, ಎ.ಆರ್.ಕೃಷ್ಣಶಾಸ್ತ್ರಿಗಳಿಗೆ ನೀಡಿ ಎಂದರೆ, ಕೃಷ್ಣಶಾಸ್ತ್ರಿಗಳು, ವೆಂಕಣ್ಣಯ್ಯ ಅವರಿಗೆ ನೀಡಿ ಎಂದಾಗ ಯಾರಿಗೆ ನೀಡುವುದು ಎನ್ನುವ ಜಿಜ್ಞಾಸೆ ಉಂಟಾಯಿತು. ಅಂತಿಮವಾಗಿ ಕುಲಸಚಿವರಾಗಿದ್ದ ಬಿಎಂಶ್ರೀ ಅವರು ಟಿ.ಎಸ್. ವೆಂಕಣ್ಣಯ್ಯ ಅವರನ್ನು ಆಯ್ಕೆ ಮಾಡಿದರು. ಈಗ ಇಂತಹ ಉದಾರತೆಯನ್ನು ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ 25 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಸಂಘಟಿತರಾಗಿ ಕಥೆ, ಲೇಖನಗಳನ್ನು ಬರೆದು, ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ದೊಡ್ಡ ವಿಷಯ. ಇಂತಹ ಕಾರ್ಯ, ಸಾಹಿತ್ಯ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಕುವೆಂಪು ಅವರು ಜಿ.ಎಸ್. ಶಿವರುದ್ರಪ್ಪ, ಪ್ರಭುಶಂಕರ, ಸುಜನಾ ಮೊದಲಾದವರ ಮೇಲೆ ಪ್ರಭಾವ ಬೀರಿದ್ದರು. ಕುವೆಂಪು ಅವರಂತೂ ಗುರುವನ್ನು ಮೀರಿಸುವ ಶಿಷ್ಯರಾಗಿದ್ದರು. ಕುವೆಂಪು ಅವರು ಆ ಕಾಲಕ್ಕೆ ಅಸ್ಪೃಶ್ಯತೆ, ಜಾತೀಯತೆ ವಿರುದ್ಧವಾಗಿದ್ದರು. ಕರ್ನಾಟಕ ಏಕೀಕರಣ ಪರವಾಗಿದ್ದರು ಎಂದು ಸ್ಮರಿಸಿದರು.

ದೇವನೂರ ಮಹದೇವ, ಆಲನಹಳ್ಳಿ ಕೃಷ್ಣ, ಕರಿಮುದ್ದೀನ್ ಸೇರಿದಂತೆ ಇನ್ನಿತರ ಪ್ರತಿಭಾನ್ವಿತರನ್ನು ಮೈಸೂರು ವಿಶ್ವವಿದ್ಯಾಲಯ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಬೇಕು. ಇಲ್ಲವಾದರೆ ಅನ್ಯಾಯಗಳು ಮುಂದುವರಿಯುತ್ತವೆ ಎಂದರು.

ಶಾಸ್ತ್ರೀಯ ಅಧ್ಯಯನ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಮಾತನಾಡಿ, ಮಹೇಶ್ ಅಗಸರಹಳ್ಳಿ, ಕೃಷ್ಣ ಜನಮನ ಹಾಗೂ ಡಾ.ಎಚ್.ಆರ್. ಅನುಪಮಾ ಅವರಿಗೆ ಸಾಹಿತ್ಯವನ್ನು ಮುಂದುವರಿಸಿಕೊಂಡು ಹೋಗುವ ಶಕ್ತಿ ಇದೆ ಎನ್ನುವುದು ಈ ಕೃತಿಗಳ ಮೂಲಕ ಭರವಸೆ ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹದೇವ್, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ.ಪಂಡಿತಾರಾಧ್ಯ ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net