

ಹಾಸನ: ಸಾಹಿತ್ಯ ಯಾರ ಸೊತ್ತಲ್ಲ, ಸಾಹಿತ್ಯ ಎಂಬುವುದು ಪ್ರತಿಭೆಯುಳ್ಳವನ ಸೊತ್ತು ಎಂದು ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಎಂ.ಜಿ.ಆರ್ ಅರಸು ಅಭಿಪ್ರಾಯಪಟ್ಟರು.
ನಗರದ ಸಾಹಿತ ಪರಿಷತ್ ಭವನದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನ ಅಂತರಾಳದಲ್ಲಿ ಯಾರು ಅಕ್ಷರಗಳನ್ನು ಕೂಡಿಸುತ್ತಾರೋ ಅವರೆಲ್ಲರು ಸಹ ಸಾಹಿತಿಗಳೆ. ಸಾಹಿತ್ಯ ರಚನೆಯಾಗಲು ಯಾವುದಾದರು ಒಂದು ಸಂಕಲ್ಪ ಇರಬೇಕು, ಆಗ ಸಾಹಿತ್ಯ ರಚನೆಯಾಗಲು ಸಾಧ್ಯ ಎಂದು ಹೇಳಿದರು.
ಸಾಹಿತ್ಯಾಸಕ್ತಿ ಉಳ್ಳವರು ವೇದಿಕಯಿಂದ ವಂಚಿತರಾದ ಸಾಹಿತಿಗಳಿಗೆ ಚುಸಾಪ ಸಂಸ್ಥೆಯು ಮೃದುವಾಗಿ ಸ್ವಾಗತಿಸಿ ವೇದಿಕೆ ಕಲ್ಪಿಸಿದೆ. ನಮ್ಮ ಸಂಸ್ಥೆ ಸಾಹಿತಿಗಳನ್ನು ಮತ್ತು ಸಾಹಿತ್ಯವನ್ನು ಅಚ್ಚುಕಟ್ಟಾಗಿ ಗೌರವಿಸಿ ನಾನಾ ಕೆಲಸಗಳನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಕಾರ್ಯನಿರತ ಸಂಘದ ಸದಸ್ಯ ರವಿನಾಕಲಗೂಡು ಮಾತನಾಡಿ ಕನ್ನಡ ಪರ ಕೆಲಸವನ್ನು ಯಾರು ಮಾಡುತ್ತಾರೋ ಅವರೆಲ್ಲ ಕನ್ನಡ ಸಾಹಿತಿಗಳೆ. ಸಾಹಿತ್ಯವನ್ನು ಕೇಂದ್ರ ಸ್ಥಾನದಿಂದ ಗ್ರಾಮೀಣದ ವರೆಗೆ ಕೊಂಡ್ಯೋಯ್ಯುವ ಕೆಲಸ ಮಾಡಿದ್ದೇವೆ. ಕನ್ನಡ ನಾಡು ನುಡಿಯ, ಮಹನೀಯರ ಹೆಸರುಗಳನ್ನು ಮುಖ್ಯ ರಸ್ತೆಗಳಲ್ಲಿ ಇಡುವ ಮೂಲಕ, ಪ್ರತಿಭಾ ಪುರಸ್ಕಾರ, ಸಮ್ಮೇಳನಗಳು, ಸೇರಿದಂತೆ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಕನ್ನಡಕ್ಕೆ ಅವಮಾನವಾದ ಸಂದರ್ಭದಲ್ಲಿ ಹೋರಾಟಗಳನ್ನು ಸಹ ನಡೆಸಿ ಸಾಹಿತ್ಯ ಕ್ಶೇತ್ರ ರಾಜ್ಯಮಟ್ಟದಲ್ಲಿ ಪಸರಿಸುವಂತೆ ಯಶಸ್ವಿಯಾಗಿ ಮಾಡಿದೇವೆ ಎಂದು ಹೇಳಿದರು.
ಇಂದಿಗೂ ಸಹ ಕನ್ನಡ ಪರ ಕೆಲಸಗಳನ್ನು ನಿರ್ವಹಿಸುತ್ತ ಕಾರ್ಯನಿರತರಾಗಿದ್ದೇವೆ. ಅದೇ ರೀತಿಯಾಗಿ ಚುಟುಕು ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಹೆಚ್ವು ಕೊಡುಗೆಗಳನ್ನು ನೀಡುವ ಮೂಲಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ನೀಡುತ್ತ, ವಿಭಿನ್ನ ಮಾದರಿಯಾಗಿ ಬೆಳೆಯುತ್ತ, ಯಾರೇ ಆಗಲಿ ಸಾಹಿತ್ಯ ಆಸಕ್ತರನ್ನು ಗುರುತಿಸಿ ವೇದಿಕೆ ಸಿಗುವಂತೆ ಯುವ ಸಾಹಿತಿಗಳನ್ನು ಹುಟ್ಟುಹಾಕುತ್ತ, ಎಲ್ಲರ ಮನಸ್ಸು ಮುಟ್ಟುವ ರೀತಿ ಚುಸಾಪ ಕಾರ್ಯನಿರ್ವಹಿಸಲಿ ಎಂದು ಅಭಿಪ್ರಾಯಪಟ್ಟರು.
ಚುಸಾಪ ಜಿಲಾಧ್ಯಕ್ಷ ನಾಡಶ್ರೀ ಬಾ.ನಂ ಲೋಕೇಶ್ ಹಾಸನ ತಾಲೂಕು ಚುಟುಕು ಸಾಗಿತ್ಯ ಪರಿಷತ್ತಿನ ನೂತನ ಪದಾಕಾರಿಗಳಿಗೆ ಶಾಲು ಹಾಕುವ ಮೂಲಕ ಪರಿಷತ್ತಿಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೆಗೌಡ, ಚುಸಾಪ ನೂತನ ಪದಾಕಾರಿಗಳಾದ ದೊಡ್ಡಮಗ್ಗೆ ರಾಜೇಂದ್ರ, ಯಲಗುಂದ ಈಶ್ವರಪ್ಪ, ಸೋಮನಾಯಕ್, ಎಂ.ಟಿ ಚಂದ್ರಕುಮಾರ್, ಗೋಪಾಲಕೃಷ್ಣ, ಶಿವಕುಮಾರ್, ಎಚ್.ಬಿ ಕುಮಾರ್, ಸ್ವಾಮಿ, ಬಿ.ಎಂ ಚಂದ್ರನಾಯಕ್, ವಾವಿತ್ರಿ ಬಾಯಿ, ರಘು ನಾಯಕ್ ಸೇರಿದಂತೆ ಇತರರು ಇದ್ದರು.