ಸಾಹಿತ್ಯ ಬದುಕಿಗೆ ಉತ್ತಮ ಮೌಲ್ಯ ನೀಡಲಿ

sri kasapa
ಶೃಂಗೇರಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಗ್ರಾಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರನ್ನು ಗೌರವಿಸಲಾಯಿತು. ಪಲ್ಲವಿ, ಶಶಿರೇಖಾ, ಇಂಚರಾ, ಪ್ರಕೃತಿ, ಪ್ರೀತಿ, ಕವಿತಾ, ಮಾನಸಾ, ಆನಂದಸ್ವಾಮಿ, ಕವಿತಾ ಬಾಪಟ್ ಇತರರಿದ್ದರು.
Published on

ಶೃಂಗೇರಿ: ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು. ಕಾಲಕಾಲಕ್ಕೆ ಹೊಸ ಸಾಹಿತ್ಯ ಸೃಷ್ಟಿಯೊಂದಿಗೆ ಪ್ರತಿಯೊಬ್ಬರ ಬದುಕಿಗೆ ಅತ್ಯುತ್ತಮ ಮೌಲ್ಯ ನೀಡಬೇಕು ಎಂದು ವೈದ್ಯೆ ಲಕ್ಷ್ಮೀಪ್ರಸಾದ್ ತಿಳಿಸಿದರು.

ಶುಕ್ರವಾರ ತಾಲೂಕು ಕಸಾಪ ಹಾಗೂ ಮಹಿಳಾ ಘಟಕದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ನಮ್ಮೊಳಗಿರುವ ಸೃಜನಶೀಲತೆಗೆ ಮೂರ್ತರೂಪ ನೀಡುವ ಸಾಹಿತ್ಯ ಪ್ರಾಕಾರಗಳು ಬೇಕಾದಷ್ಟು ಇವೆ. ಕಥೆ, ಕವನ, ನೀಳ್ಗತೆ, ಕಾದಂಬರಿ ಮುಂತಾದ ಪ್ರಕಾರಗಳ ಪರಿಚಯ ನಮಗೆ ಸಿಗಬೇಕಾದರೆ ಪುಸ್ತಕಗಳನ್ನು ಓದಬೇಕು ಎಂದರು.

ಮಹಿಳೆಯರು ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿ, ಸಂಚಿಹೊನ್ನಮ್ಮ, ತ್ರಿವೇಣಿ, ವೈದೇಹಿ, ಸಾಯುಸುತೆ ಮುಂತಾದ ಹಿರಿಯ ಸಾಹಿತಿಗಳ ಬರವಣಿಗೆಯ ಮೌಲ್ಯ ಇಂದಿಗೂ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು. ಪ್ರತಿ ಕಲಿಕೆಗೆ ಆಧಾರ ಸಾಹಿತ್ಯ. ಸಾಹಿತ್ಯದಿಂದ ಬೌದ್ಧಿಕ ಪ್ರಗತಿ ಸಾಧ್ಯ. ನಮ್ಮೊಳಗಿನ ಸುಪ್ತಪ್ರಜ್ಞೆಗೆ ಪೂರಕವಾಗಿರುವ ಉತ್ತಮ ಸಾಹಿತ್ಯ ಗ್ರಂಥಗಳು ಸಂಸ್ಕೃತಿಯ ಮೌಲ್ಯ ಹೆಚ್ಚಿಸುತ್ತವೆ ಎಂದು ಹೇಳಿದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಮಾತನಾಡಿ, ಪಾಲಕರು ಮನೆಯಲ್ಲಿ ಹೆಣ್ಣುಮಕ್ಕಳಿಗೆ ಅವರ ಮೌಲ್ಯಗಳನ್ನು ತಿಳಿಸುವ ಅಗತ್ಯವಿದೆ. ತಾರತಮ್ಯ ಭಾವ ಬದಿಗಿಟ್ಟು ಹೆಣ್ಣಿನ ಅಂತರ್ಗತದ ಸೃಜನಶೀಲತೆಗೆ ಮಹಿಳೆಯರು ಪ್ರೋತ್ಸಾಹಿಸಬೇಕು. ಅಡುಗೆ ಮನೆಯಿಂದ ಅಂತರಿಕ್ಷದ ತನಕ ಮಹಿಳೆಯರು ಸಾಧನೆ ಮಾಡಿದ್ದು, ಒಂದು ಹೆಣ್ಣಿಗೆ ಮತ್ತೊಬ್ಬ ಹೆಣ್ಣು ಸಹಕಾರ ನೀಡುವ ಭಾವ ಹೊರಹೊಮ್ಮಬೇಕು. ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ಮುನ್ನಡೆ ಸಾಧಿಸಿ ತನ್ನತನ ಉಳಿಸಿಕೊಳ್ಳಬೇಕು ಎಂದರು.

ಗ್ರಾಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರು, ಹಿರಿಯ ಹೆರಿಗೆ ತಜ್ಞೆ ಸರೋಜಮ್ಮ ಕಿಗ್ಗಾ ಹಾಗೂ ಸುಮಂಗಲಿ ಆನಂದಸ್ವಾಮಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಬಹುಮಾನ ವಿತರಿಸಿದರು.

ದತ್ತಿ ದಾನಿ ಗಾಯತ್ರಿ ರಾಮಚಂದ್ರ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾಲಕ್ಮೀನಾರಾಯಣ್, ಕಸಬಾ ಮತ್ತು ಕಿಗ್ಗಾ ಹೋಬಳಿ ಘಟಕದ ಅಧ್ಯಕ್ಷರಾದ ಅಂಗುರ್ಡಿ ದಿನೇಶ್, ಮಂಜುನಾಥ್ ನಾಯ್ಕ, ಮಹಿಳಾ ಘಟಕದ ಕಾರ್ಯದರ್ಶಿ ನೇತ್ರಾವತಿ, ಬಿಇಒ ವರಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net