

ಚಿತ್ರದುರ್ಗ: ಮಾನವೀಯ ಮೌಲ್ಯ, ಪ್ರಕೃತಿ ಪ್ರೇಮ, ಸರಳತೆಯ ಮೂಲಕ ಸಾಹಿತ್ಯ ಪ್ರಿಯರ ಹೃದಯ ಗೆದ್ದು, ಅಜರಾಮರ ಸ್ಥಾನ ಪಡೆದ ಡಾ. ನಾ.ಡಿಸೋಜ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಾಹಿತಿ ಸರೀನಾ ತಿಳಿಸಿದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಮಹಾರಾಣಿ ಕಾಲೇಜಿನ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ. ನಾ.ಡಿಸೋಜ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಿಗಳಲ್ಲಿ ಸಮಾಜಪರ ಕಾಳಜಿ, ಚಿಂತನೆಗಳಿದ್ದವು. ಪ್ರಕೃತಿಯನ್ನು ಅತ್ಯಂತ ಆಳವಾಗಿ ಪ್ರೀತಿಸುತ್ತಿದ್ದ ಅವರು ಅದರ ಸೌಂದರ್ಯ, ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿಯೂ ಅನೇಕ ಕಥೆಗಳನ್ನು ಬರೆದಿದ್ದು, ಓದುವ ಹವ್ಯಾಸ ಬೆಳೆಸಲು ಸಹಕಾರಿಯಾಗಿವೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಯಾ ಪುತ್ತೂರ್ಕರ್ ಮಾತನಾಡಿ, ಡಿಸೋಜ ತಮ್ಮ ಸಾಧನೆಗಳ ಹೊರತಾಗಿಯೂ ಅತ್ಯಂತ ಸರಳ ಜೀವನ ನಡೆಸಿದ್ದಾರೆ. ಅವರ ಸರಳತೆ ಬರಹಗಳಲ್ಲೂ ಪ್ರತಿಫಲಿಸುತ್ತದೆ. ಕಥೆ-ಕಾದಂಬರಿಗಳು ಜನಸಾಮಾನ್ಯರ ಜೀವನಕ್ಕೂ ಹತ್ತಿರವಾಗಿವೆ ಎಂದು ಸ್ಮರಿಸಿದರು.
ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಮಾತನಾಡಿ, ಡಿಸೋಜ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ ಎಂದು ಸಲಹೆ ನೀಡಿದರು.
ಇದೇ ವೇಳೆ ಕವಿಗಳಾದ ಶಿವರುದ್ರಪ್ಪ ಪಂಡ್ರಳ್ಳಿ, ಉಷಾರಾಣಿ, ಸೌಮ್ಯಾ ನವೀನ್ ಮಸ್ಕಲ್, ಡಾ. ನವೀನ್ ಸಜ್ಜನ್, ಪ್ರವೀಣ್ ಬೆಳಗೆರೆ, ರವೀಶ್, ಸತೀಶ್‌ಕುಮಾರ್ ಡಿಸೋಜ ಅವರ ಕುರಿತ ಕವನ ವಾಚಿಸಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಉಪನ್ಯಾಸಕ ಕೆಂಚವೀರಪ್ಪ, ನಿವೃತ್ತ ಶಿಕ್ಷಣಾಧಿಕಾರಿ ನಾಗರಾಜ್, ಪರಿಸರ ಕಾರ್ಯಕರ್ತ ಮಲ್ಲಿಕಾರ್ಜುನಪ್ಪ, ಆರ್‌ಪಿಒ ಮಲ್ಲಿಕಾರ್ಜುನಚಾರ್, ಯೋಗ ಶಿಕ್ಷಕಿಯರಾದ ಮಂಜುಳಾ, ವಸಂತಲಕ್ಷ್ಮೀ ಇತರರಿದ್ದರು.